ಶನಿವಾರಸಂತೆ, ಮಾ. 29: ಶನಿವಾರಸಂತೆ ಗ್ರಾ.ಪಂ.ಯ ಕಚೇರಿ ಹಿಂಭಾಗದಲ್ಲಿರುವ ಪಂಚಾಯಿತಿಗೆ ಸೇರಿದ ಖಾಲಿ ಜಾಗಕ್ಕೆ ಸ್ಥಳೀಯರೊಬ್ಬರು ಅತಿಕ್ರಮವಾಗಿ ಅಕ್ರಮ ಪ್ರವೇಶ ಮಾಡಿ ಬೇಲಿ ನಿರ್ಮಿಸಿದ್ದುದನ್ನು ಗ್ರಾ.ಪಂ. ಅಧ್ಯಕ್ಷರು, ಆಡಳಿತ ಮಂಡಳಿ ಸದಸ್ಯರೊಂದಿಗೆ ಸ್ಥಳಕ್ಕೆ ಆಗಮಿಸಿ ಪಂಚಾಯಿತಿ ಸಿಬ್ಬಂದಿಗಳ ಸಹಕಾರದೊಂದಿಗೆ ಬೇಲಿಯನ್ನು ತೆರವುಗೊಳಿಸಲಾಯಿತು.

ಶನಿವಾರಸಂತೆ 1ನೇ ವಿಭಾಗದಲ್ಲಿರುವ ಪಂಚಾಯಿತಿಗೆ ಸೇರಿದ ಲಕ್ಷಾಂತರ ಬೆಲೆ ಬಾಳುವ ಖಾಲಿ ಜಾಗವನ್ನು ಸ್ಥಳೀಯ ನಿವಾಸಿ ವೆಂಕಟೇಶ್ ಮೂರ್ತಿ ಎಂಬವರು ಭಾನುವಾರದಂದು ಕಚೇರಿಯಲ್ಲಿ ಯಾರೂ ಇಲ್ಲದ ಸಮಯವನ್ನು ಉಪಯೋಗಿಸಿಕೊಂಡು ಜಾಗಕ್ಕೆ ಅತಿಕ್ರಮ ಪ್ರವೇಶಿಸಿ ಕಲ್ಲಿನ ಕಂಬಗಳನ್ನು ನೆಟ್ಟು ತಂತಿ ಬೇಲಿ ನಿರ್ಮಿಸಿದ್ದರು. ಈ ಬಗ್ಗೆ ಮಾಹಿತಿ ಪಡೆದ ಅಧ್ಯಕ್ಷರು ಪಂಚಾಯಿತಿ ಆಡಳಿತ ಮಂಡಳಿ ಸದಸ್ಯರೊಂದಿಗೆ ಸ್ಥಳಕ್ಕೆ ಆಗಮಿಸಿ ಪಂಚಾಯಿತಿ ನೌಕರರ ಸಹಕಾರದೊಂದಿಗೆ ಕಲ್ಲು ಕಂಬ ಹಾಗೂ ತಂತಿ ಬೇಲಿಯನ್ನು ತೆರವುಗೊಳಿಸಲಾಯಿತು.

ಈ ಸಂದರ್ಭ ಕಂದಾಯ ಪರಿವೀಕ್ಷಕ ಮಧುಸೂದನ್ ಪಂಚಾಯಿತಿ ಅಧ್ಯಕ್ಷ ಮಹಮ್ಮದ್ ಗೌಸ್, ಉಪಾಧ್ಯಕ್ಷೆ ಗೀತಾ ಹರೀಶ್, ಸದಸ್ಯರುಗಳಾದ ಸೌಭಾಗ್ಯಲಕ್ಷ್ಮಿ, ಆದಿತ್ಯಗೌಡ ಹಾಗೂ ಕಾರ್ಯದರ್ಶಿ ತಮ್ಮಯ್ಯಚಾರ್ ಅವರು ಶನಿವಾರಸಂತೆ ಪೊಲೀಸ್ ಠಾಣೆಗೆ ಲಿಖಿತವಾಗಿ ದೂರು ಸಲ್ಲಿಸಿದರು.