ಶ್ರೀಮಂಗಲ, ಮಾ. 29: ರೈತರು ಮತ್ತು ಬೆಳೆಗಾರರಿಗೆ ಸ್ಪಂದಿಸುವ ನಿಟ್ಟಿನಲ್ಲಿ ಈ ವರ್ಷ ನಬಾರ್ಡ್‍ನಿಂದ 2 ಕೋಟಿ ಹಣ ಬಿಡುಗಡೆಯಾಗಿದ್ದು, ಇದರಲ್ಲಿ ಹುದಿಕೇರಿ ಭಾಗಕ್ಕೆ ಸುಮಾರು 50 ಲಕ್ಷ ಅನುದಾನದಲ್ಲಿ ಗೋದಾಮು ನಿರ್ಮಾಣ ಮಾಡಲಾಗುವದು ಎಂದು ಗೋಣಿಕೊಪ್ಪಲು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಮಾಚಿಮಂಡ ಸುವೀನ್ ಗಣಪತಿ ತಿಳಿಸಿದರು.

ಹುದಿಕೇರಿ ಕೊಡವ ಸಮಾಜದಲ್ಲಿ ನಡೆದ ರೈತ ನೋಂದಣಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಇಂದು ವಿವಿಧ ಕಂಪೆನಿಗಳ ವಸ್ತುಗಳನ್ನು ಮತ್ತು ನಮ್ಮ ಮನೆಗಳಲ್ಲಿ ಇರುವ ಅನವಶ್ಯಕ ವಸ್ತುಗಳನ್ನು ಆನ್ ಲೈನ್ ಮುಖಾಂತರ ಬೇಕಾದವರಿಗೆ ತಲುಪಿಸಿ ಆ ವಸ್ತುವಿಗೆ ನಿಗದಿಯಾದ ಬೆಲೆಗೆ ಬಿಕರಿಯಾಗುತ್ತಿದ್ದು ಇಲ್ಲಿ ಮಧ್ಯವರ್ತಿಗಳ ಹಾವಳಿಯಿಂದ ಗ್ರಾಹಕ ಮತ್ತು ಮಾರಟಗಾರ ಇಬ್ಬರು ಇದರ ಲಾಭವನ್ನು ಪಡೆದುಕೊಳ್ಳುವಂತಾಗಿದೆ. ಇದೇ ರೀತಿಯಲ್ಲಿ ನಾವುಗಳು ಬೆಳೆದ ಬೆಳೆಯನ್ನು ಅನ್ ಲೈನ್ ಮುಖಾಂತರ ಗುಣಮಟ್ಟದ ಆಧಾರದ ಮೇಲೆ ನಾವೇ ಬೆಲೆ ನಿಗದಿಪಡಿಸಿ ಗ್ರಾಹಕರಿಗೆ ತಲುಪಿಸುವಂತಾಂಗಬೇಕು ಎಂದರು.

ಹುದಿಕೇರಿ ಗ್ರಾ.ಪಂ. ಅಧ್ಯಕ್ಷೆ ಮತ್ರಂಡ ರೇಖಾ ಪೊನ್ನಪ್ಪ ಮಾತನಾಡಿ, ದೇಶದಲ್ಲಿ ಇಂದು ರೈತ ಹವಾಮಾನ ವೈಪರೀತ್ಯ, ಉತ್ಪಾದನಾ ಹೆಚ್ಚಳ, ಕೂಲಿ ಕಾರ್ಮಿಕರ ಸಮಸ್ಯೆಯೊಂದಿಗೆ ಮಧ್ಯವರ್ತಿಗಳ ಹಾವಳಿಯಿಂದ ಉತ್ತಮ ಬೆಲೆಯನ್ನು ಗಳಿಸದೆ ತೊಂದರೆಗೊಳಗಾಗಿದ್ದಾರೆ. ಸರಕಾರದ ಈ ಯೋಜನೆಯಲ್ಲಿ ಎಲ್ಲಾ ರೈತರು ಭಾಗವಹಿಸುವದರ ಮೂಲಕ ರೈತರ ಸಮಸ್ಯೆಗೆ ಮುಕ್ತಿ ಸಿಗಲಿ ಎಂದು ಹಾರೈಸಿದರು.

ಈ ಸಮಯದಲ್ಲಿ ಭತ್ತದ ಬೆಳೆಯಲ್ಲಿ ಉತ್ತಮ ಸಾಧನೆ ಮಾಡಿದ ಕೊಣಂಗೇರಿ ಗ್ರಾಮದ ಚಕ್ಕೆರ ಸಚಿನ್ ಸೋಮಯ್ಯ, ಅಜ್ಜಿಕುಟ್ಟಿರ ಅಶೋಕ್, ಜೋಯಪ್ಪ, ಬೆಳ್ಳೂರು ಗ್ರಾಮದ ನೂರೇರ ಬೊಳ್ಳಯ್ಯ, ಮುಕ್ಕಾಟಿರ ಗಿರೀಶ್, ಬೊಳ್ಳಿಮಾಡ ಪೂಣಚ್ಚ, ನಡಿಕೇರಿ ಗ್ರಾಮದ ಕಳ್ಳಿಚಂಡ ಪೆಮ್ಮಯ್ಯ, ಮಾಣಿಯಪಂಡ ಚಿಟ್ಯಪ್ಪ, ತಮ್ಮಯ್ಯ, ಮುಗುಟಗೇರಿ ಗ್ರಾಮದ ಕಳ್ಳಿಚಂಡ ಅಶೋಕ್, ರವೀಂದ್ರ, ಚೀರಂಡ ರಘು ಅಯ್ಯಪ್ಪ, ಹೈಸೂಡ್ಲೂರು ಗ್ರಾಮದ ವಾಸು ಮಾದಪ್ಪ, ಎಂ.ಕೆ ರಮೇಶ್, ಬಲ್ಯಮಿದೇರಿರ ಪ್ರಕಾಶ್ ಇವರುಗಳಿಗೆ ರೂ. 500 ರಂತೆ ಪ್ರೋತ್ಸ್ಸಾಹ ಧನ ನೀಡಲಾಯಿತು.

ವೇದಿಕೆಯಲ್ಲಿ ಕೃಷಿ ಮಾರುಕಟ್ಟೆ ಸಮಿತಿಯ ಹುದಿಕೇರಿ ಭಾಗದ ಸದಸ್ಯ ಅಜ್ಜಿಕುಟ್ಟಿರ ಪ್ರವಿಣ್ ಉತ್ತಪ್ಪ, ನರೇನ್ ಕಾರ್ಯಪ್ಪ, ಹುದಿಕೇರಿ ಕೊಡವ ಸಮಾಜದ ಅಧ್ಯಕ್ಷ ಕೊದಂಡ ಸನ್ನು ಉತ್ತಪ್ಪ ಉಪಸ್ಥಿತರಿದ್ದರು, ಕಾರ್ಯಕ್ರಮದಲ್ಲಿ ಸುಮಾರು 350 ಕ್ಕಿಂತಲೂ ಅಧಿಕ ರೈತರು ನೊಂದಣಿಯನ್ನು ಮಾಡಿಸಿಕೊಂಡರು.