ಮಡಿಕೇರಿ, ಮಾ. 29: ಪಯಸ್ವಿನಿ ಸಹಕಾರ ಸಂಘ ಸಂಪಾಜೆ ಮತ್ತು ಕೆ.ಎಂ.ಸಿ ಆಸ್ಪತ್ರೆ ಅತ್ತಾವರ ಇವರ ಜಂಟಿ ಆಶ್ರಯದಲ್ಲಿ ಸದಸ್ಯರ ಆರೋಗ್ಯ ರಕ್ಷಣಾ ಕಾರ್ಯಕ್ರಮದ ಅಂಗವಾಗಿ ಉಚಿತ ವೈದ್ಯಕೀಯ ಶಿಬಿರವು ಸಂಪಾಜೆಯ ಪಯಸ್ವಿನಿ ಸಹಕಾರ ಸದನದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಸಂಘದ ಅಧ್ಯಕ್ಷ ಬಾಲಚಂದ್ರ ಕಳಗಿ ನೆರವೇರಿಸಿದರು.

ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವದರಿಂದ ಸದಸ್ಯರ ಮತ್ತು ಸಂಘದ ಬಾಂಧವ್ಯ ಇನ್ನಷ್ಟು ವೃದ್ಧಿಸುತ್ತದೆ ಮತ್ತು ಸದಸ್ಯರಿಗೆ ಅಗತ್ಯ ಆರೋಗ್ಯದ ಸಲಹೆ ಮತ್ತು ಚಿಕಿತ್ಸೆ ದೊರಕಿದಂತಾಗುತ್ತದೆ. ಇದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ಅವರು ಹೇಳಿದರು. ಸಂಘದ ಉಪಾಧ್ಯಕ್ಷ ಹೊನ್ನಪ್ಪ ಅಮೆಚೂರು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಕೆ. ಆನಂದ, ಸಂಘದ ನಿರ್ದೇಶಕರುಗಳಾದ ಎನ್.ಸಿ. ಅನಂತ, ಮನೋರಮಾ ಬೊಳ್ತಾಜೆ ಮತ್ತು ಆದಂಕುಂಞÂ ಸಂಟ್ಯಾರ್, ಮುಖ್ಯ ಅತಿಥಿಗಳಾಗಿ ಚೆಂಬು ಗ್ರಾಮ ಪಂಚಾಯಿತಿ ಅಧ್ಯಕ್ಷ ಮಾಧವ ಪೊಯ್ಯಮಜಲು, ಸಂಪಾಜೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸುಂದರ ಬಿ.ಆರ್. ಇವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕೆ.ಎಂ.ಸಿ. ಆಸ್ಪತ್ರೆ ಅತ್ತಾವರ, ಮಂಗಳೂರು ಇದರ ಶಿಬಿರ ಸಂಯೋಜಕ ಮನಮೋಹನ ಡಿ.ಬಿ., ಇಲ್ಲಿನ ಕಿವಿ, ಮೂಗು ಮತ್ತು ಗಂಟಲು ವಿಭಾಗದ ತಜ್ಞ ಡಾ. ಹರೀಶ್, ನೇತ್ರ ಚಿಕಿತ್ಸಾ ವಿಭಾಗದ ತಜ್ಞ ಡಾ. ಟೀನಾ ಜ್ಹಾನ್, ಮತ್ತು ಎಲುಬು ಮತ್ತು ಕೀಲು ವಿಭಾಗದ ತಜ್ಞರು, ಸ್ತ್ರೀ ರೋಗ ತಜ್ಞರು, ಮಕ್ಕಳ ತಜ್ಞರು, ಸಾಮಾನ್ಯ ಚಿಕಿತ್ಸಾ ವಿಭಾಗದ ತಜ್ಞರುಗಳು ಉಪಸ್ಥಿತರಿದ್ದು ಶಿಬಿರಕ್ಕೆ ಆಗಮಿಸಿದ ಸಂಘದ ಸದಸ್ಯರುಗಳು ಮತ್ತು ಸಾರ್ವಜನಿಕರಿಗೆ ಉತ್ತಮ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸಿದರು.

ಶಿಬಿರದಲ್ಲಿ ಸುಮಾರು 400 ಕ್ಕೂ ಹೆಚ್ಚು ಜನ ಭಾಗವಹಿಸಿ ಸಲಹೆ ಮತ್ತು ಚಿಕಿತ್ಸೆಯನ್ನು ಪಡೆದುಕೊಂಡರು. ಕಣ್ಣಿನ ದೃಷ್ಟಿ ಸಮಸ್ಯೆ ಇದ್ದ ಸದಸ್ಯರುಗಳಿಗೆ ಸುಮಾರು 230 ಕ್ಕೂ ಹೆಚ್ಚು ಕನ್ನಡಕಗಳನ್ನು ಉಚಿತವಾಗಿ ವಿತರಿಸಲಾಯಿತು.