ಬೆಂಗಳೂರು, ಮಾ. 30: ಕೊಡಗಿನಲ್ಲಿ ಇತ್ತೀಚೆಗೆ ಹೆಚ್ಚುತ್ತಿರುವ ಆನೆ - ಮಾನವ ಸಂಘರ್ಷವನ್ನು ತಡೆಗಟ್ಟಲು ಸರಕಾರ ಸನ್ನದ್ಧವಾಗಿದ್ದು, ಅತೀ ಶೀಘ್ರದಲ್ಲಿ ವೈಜ್ಞಾನಿಕವಾಗಿ ಸೋಲಾರ್ ಬೇಲಿ ಹಾಗೂ ಕಂದಕಗಳ ನಿರ್ಮಾಣ ಮಾಡಲು ಅರಣ್ಯ ಇಲಾಖೆ ಸನ್ನದ್ಧವಾಗಿದೆಯೆಂದು ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ಎಂ. ಪದ್ಮಿನಿ ಪೊನ್ನಪ್ಪ ತಿಳಿಸಿದ್ದಾರೆ.

ಪತ್ರಿಕಾ ಪ್ರಕಟಣೆಯಲ್ಲಿ ಉಲ್ಲೇಖಿಸಿರುವ ಅವರು ನಾನು ಇತ್ತೀಚೆಗೆ ಕೊಡಗು ಮತ್ತು ಇನ್ನಿತರ ಕಡೆಗಳಲ್ಲಿ ಹೆಚ್ಚಾಗುತ್ತಿರುವ ಆನೆ - ಮಾನವ ಸಂಘರ್ಷದ ಸಂಪೂರ್ಣ ಅರಿವು ಮತ್ತು ಮಾಹಿತಿ ಹೊಂದಿದ್ದು, ಸರಕಾರ ಎಂದಿಗೂ ಅಮಾಯಕರ, ಕಾರ್ಮಿಕರ ಮತ್ತು ಬಡವರ ಪರವಾಗಿದೆ ಎಂದಿದ್ದಾರೆ. ಇಲ್ಲಿಯವರೆಗೂ ಕೊಡಗಿನಲ್ಲಿ ನಿರಂತರವಾಗಿ ಕಾಡಾನೆ ಧಾಳಿಯಾಗುತ್ತಿದ್ದು, ಬಲಿಯಾದವರ ಸಂಖ್ಯೆ ಮೂರು ವರುಷಗಳಲ್ಲಿ ಮೂವತ್ತು ದಾಟಿದ್ದು, ಇದನ್ನು ಪರಿಹರಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಹಾಗೂ ಅರಣ್ಯ ಇಲಾಖೆ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಶೀಘ್ರದಲ್ಲೇ ಕೆಲವೊಂದು ಯೋಜನೆಗಳನ್ನು ಕಾರ್ಯರೂಪಕ್ಕೆ ತರಲಾಗುವದು ಎಂದರು. ಆನೆ - ಮಾನವ ಸಂಘರ್ಷದಲ್ಲಿ ಸಾವನ್ನಪ್ಪಿದವರಿಗೆ ಪರಿಹಾರ ಮೊತ್ತವನ್ನು ಹೆಚ್ಚು ಮಾಡಬೇಕೆಂಬ ಒತ್ತಾಯಗಳು ಕೇಳಿಬರುತ್ತಿದೆ. ಪರಿಹಾರ ಮೊತ್ತವನ್ನು ಹೆಚ್ಚು ಮಾಡುವ ಪ್ರಸ್ತಾವನೆಯನ್ನು ಸರಕಾರದ ಮುಂದೆ ಇಡಲಾಗುತ್ತದೆ. ಪರಿಹಾರ ಮೊತ್ತಕ್ಕಿಂತ ಆನೆ - ಮಾನವ ಸಂಘರ್ಷವನ್ನು ತಡೆಯಲು ಸೂಕ್ತ ವೈಜ್ಞಾನಿಕ ಪರಿಹಾರವನ್ನು ಕಂಡುಕೊಳ್ಳಬೇಕಿದ್ದು, ಈ ನಿಟ್ಟಿನಲ್ಲಿ ಸರಕಾರ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದೆ ಎಂದರು.

ಕಳೆದ ವಾರ ಆನೆ ಧಾಳಿಯಿಂದ ಸಾವನ್ನಪ್ಪಿದ ಕಾಲೇಜು ವಿದ್ಯಾರ್ಥಿನಿ ಸಫಾನ ಬಗ್ಗೆ ಪ್ರತಿಕ್ರಿಯಿಸಿದ ಅವರು, ಆ ಮಗಳನ್ನು ಕಳೆದುಕೊಂಡು ನೋವಿನಲ್ಲಿ ಮಡುಗಟ್ಟಿರುವ ಆ ಕುಟುಂಬಕ್ಕೆ ದೇವರು ಆ ನೋವನ್ನು ನುಂಗುವ ಶಕ್ತಿಯನ್ನು ನೀಡಲಿ ಎಂದು ಸಂತಾಪ ವ್ಯಕ್ತಪಡಿಸಿದರು.

ಸಫಾನಳನ್ನು ಕೊಂದ ಆನೆಯನ್ನು ಶೀಘ್ರವಾಗಿ ಹಿಡಿಯಲು ಈಗಾಗಲೇ ಆದೇಶವನ್ನು ಹೊರಡಿಸಲಾಗಿದೆ. ಈ ಸಂದರ್ಭದಲ್ಲಿ ಆಕೆಯ ಸಹೋದರನಿಗೂ ಗಾಯಗಳಾಗಿದ್ದು, ಮಾನಸಿಕವಾಗಿ ತೊಂದರೆಗೆ ಒಳಗಾಗಿರುವದು ತಿಳಿದುಬಂದಿದ್ದು, ಆತನ ಚಿಕಿತ್ಸಾ ವೆಚ್ಚಕ್ಕೂ ಸರಕಾರದಿಂದ ಪರಿಹಾರ ಒದಗಿಸುವಂತೆ ಪ್ರಯತ್ನಿಸಲಾಗುವದು ಎಂದು ಪದ್ಮಿನಿ ಪೊನ್ನಪ್ಪ ತಿಳಿಸಿದ್ದಾರೆ.