ಕೂಡಿಗೆ, ಮಾ. 30: ಇಲ್ಲಿಗೆ ಸಮೀಪದ ತೊರೆನೂರು ಗ್ರಾಮದಲ್ಲಿ ತೊರೆನೂರು ದೇವಾಲಯ ಸಮಿತಿಯ ವತಿಯಿಂದ ಯುಗಾದಿ ಹಬ್ಬದಂದು ಸಾಂಪ್ರಾದಾಯಿಕವಾಗಿ ನಡೆದುಕೊಂಡು ಬರುತ್ತಿರುವ ಹೊನ್ನಾರು (ಚಿನ್ನದ ಸಾಲು) ಉತ್ಸವ ಆಚರಣೆ ಮಾಡಲಾಯಿತು. ಉತ್ಸವ ಆಚರಣೆಗೆ ಗ್ರಾಮದಲ್ಲಿರುವ ರೈತರುಗಳು ತಮ್ಮ ತಮ್ಮ ಜೋಡಿ ಎತ್ತುಗಳನ್ನು ಸಿಂಗರಿಸಿ ದೇವಾಲಯ ಆವರಣಕ್ಕೆ ತಂದು ಸಮಿತಿಯ ವತಿಯಿಂದ ದೇವಸ್ಥಾನದ ಬೃಹತ್ ಶ್ರೀ ಬಸವೇಶ್ವರ ಮೂರ್ತಿಗೆ ಪೂಜೆ ಸಲ್ಲಿಸಿ ದೇವರ ಭೂಮಿಯಲ್ಲಿ ಸಂಪ್ರ್ರದಾಯದಂತೆ ಪಂಚಾಂಗ ನೋಡಿ ಪಂಚಾಂಗದಲ್ಲಿ ಮೂಡಿಬಂದ ಅಕ್ಷರದನ್ವಯ ಸ್ಥಳೀಯ ಪುಟ್ಟರಾಜು ಎಂಬವರು, ಸಿಂಗಾರಗೊಂಡ ತಮ್ಮ ಜೋಡಿ ಎತ್ತುಗಳಿಂದ ಪೂರ್ವದಿಂದ ಪಶ್ಚಿಮಕ್ಕೆ ಮುನ್ನಡೆಸುವದರೊಂದಿಗೆ ಹೊನ್ನಾರ ಉತ್ಸವಕ್ಕೆ ಚಾಲನೆ ನೀಡಲಾಯಿತು.

ಉತ್ಸವದಲ್ಲಿ ಗ್ರಾಮದ 100 ಕ್ಕೂ ಅಧಿಕ ರೈತರ ಜೋಡಿ ಎತ್ತುಗಳು ಸಿಂಗಾರಗೊಂಡು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಜೋಡಿ ಬಸವೇಶ್ವರನಿಗೆ ಪೂಜೆ ಸಲ್ಲಿಸಲಾಯಿತು. ನಂತರ ಅವರವರ ಜಮೀನುಗಳಿಗೆ ತೆರಳಿ ಹೊನ್ನಾರು (ಚಿನ್ನದ ಸಾಲು) ಉಳುಮೆ ಮಾಡುವದರ ಮೂಲಕ ಸಾಂಪ್ರದಾಯಿಕ ಜಮೀನಿನ

(ಮೊದಲ ಪುಟದಿಂದ) ಉಳುಮೆಗೆ ಯುಗಾದಿಯ ದಿನದಂದು ಚಾಲನೆ ನೀಡ ಲಾಯಿತು. ಊರಿನ ಬೀದಿಗಳಲ್ಲಿ ವಿವಿಧ ರಂಗೋಲಿಗಳ ಮೂಲಕ ಹೊನ್ನಾರು ಉತ್ಸವವನ್ನು ಸ್ವಾಗತಿಸ ಲಾಯಿತು. ಈ ಸಂದರ್ಭ ದೇವಾಲಯ ಸಮಿತಿಯ ಅಧ್ಯಕ್ಷ ಟಿ.ಕೆ. ಪಾಂಡುರಂಗ, ಕಾರ್ಯದರ್ಶಿ ಶಿವಾನಂದ, ಖಜಾಂಚಿ ಟಿ.ವಿ. ಜಗದೀಶ್ ಸೇರಿದಂತೆ ಸಮಿತಿಯ ನಿರ್ದೇಶಕರು, ನೂರಾರು ಗ್ರಾಮಸ್ಥರು ಹೊನ್ನಾರು ಉತ್ಸವದಲ್ಲಿ ಪಾಲ್ಗೊಂಡಿದ್ದರು.