ಮಡಿಕೇರಿ, ಮಾ. 30: ಕೊಡಗು ಜಿಲ್ಲೆಯಲ್ಲಿ ರಾಷ್ಟ್ರಘಾತುಕ ಶಕ್ತಿಗಳನ್ನು ಪೋಷಿಸುತ್ತಾ ಬುಡಮೇಲು ಕೃತ್ಯಗಳಿಗೆ ಹವಣಿಸುತ್ತಿರುವವರನ್ನು ನಿಗ್ರಹಿಸುವ ಮೂಲಕ ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಸಿಎನ್ಸಿ ಆಗ್ರಹಿಸಿದೆ.
ಸಂಘಟನೆಯ ಅಧ್ಯಕ್ಷ ಎನ್.ಯು. ನಾಚಪ್ಪ ಅವರು ಈ ಬಗ್ಗೆ ಮಾಜಿ ವಿಧಾನ ಪರಿಷತ್ ಸದಸ್ಯರೊಬ್ಬರ ಬಗ್ಗೆ ಸಂಶಯ ವ್ಯಕ್ತಪಡಿಸಿ ಕಾನೂನು ಕ್ರಮದಡಿ ತನಿಖೆ ನಡೆಸಬೇಕೆಂದು ಕೇಂದ್ರ ಗೃಹ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ.
ಇಂತಹ ವ್ಯಕ್ತಿಗಳಿಂದ ಜಾಗತಿಕ ಭಯೋತ್ಪಾದನೆಗೆ ಕೊಡಗಿನಲ್ಲಿ ನೆಲೆ ಕಲ್ಪಿಸುವ ಯತ್ನ ತೆರೆಮರೆಯಲ್ಲಿ ನಡೆಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿರುವ ನಾಚಪ್ಪ, ರಾಷ್ಟ್ರೀಯ ತನಿಖಾದಳ ಇಂತಹವರ ಮೇಲೆ ಕಣ್ಗಾವಲು ಇರುವಂತೆ ಒತ್ತಾಯಿಸಿದ್ದಾರೆ.
ಈ ಸಂಬಂಧ ಕರ್ನಾಟಕ ರಾಜ್ಯಪಾಲರು, ಕೇಂದ್ರ ಗೃಹ ಸಚಿವರು ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರರಿಗೆ ಪತ್ರ ರವಾನಿಸಿದ್ದಾರೆ.
ಕೊಡಗಿನಲ್ಲಿ ಟಿಪ್ಪು ಜಯಂತಿ ಆಚರಣೆಗೆ ಕುಮ್ಮಕ್ಕು, ಆ ಮೂಲಕ ಜಿಲ್ಲೆಯಲ್ಲಿ ಗೊಂದಲ ಮೂಡಿಸುವದು, ಕೊಡವರನ್ನು ಬುಡಕಟ್ಟು ಪಟ್ಟಿಗೆ ಸೇರಿಸುವ ಪ್ರಯತ್ನಕ್ಕೆ ವಿರೋಧ ಮಾಡುವ ಈ ವ್ಯಕ್ತಿ ಪನ್ನಂಗಾಲತಮ್ಮೆ ದೇವಾಲಯದಲ್ಲಿ ದಲಿತರು, ಹಿಂದೂಗಳು ಎಂದು ಪ್ರತ್ಯೇಕಿಸಿ ಪರಸ್ಪರ ವೈಷಮ್ಯಕ್ಕೆ ಕಾರಣರಾಗಿದ್ದಾರೆ ಎಂದು ನಾಚಪ್ಪ ಆರೋಪಿಸಿದ್ದಾರೆ. ಕೊಡಗಿನ ಅರಣ್ಯ ಪ್ರದೇಶಗಳನ್ನು ಮಾವೋವಾದಿ ಬೆಂಬಲಿಗರಿಗೆ ನೀಡುವ ಪ್ರಯತ್ನದಲ್ಲೂ ಇವರ ಕೈವಾಡವಿದೆ ಎಂದು ಆರೋಪಿಸಿದ್ದಾರೆ.