ಮಡಿಕೇರಿ, ಮಾ. 30: ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಸ್ನಾತಕೋತ್ತರ ಆಂಗ್ಲ ವಿದ್ಯಾರ್ಥಿಗಳಿಗಾಗಿ ಒಂಭತ್ತು ದಿನಗಳ ರಂಗ ತರಬೇತಿ ಕಾರ್ಯಾಗಾರವನ್ನು ಏರ್ಪಡಿಸಲಾಗಿದ್ದು, ಕಾರ್ಯಾಗಾರದ ಕೊನೆಯ ದಿನ ಕಾಲೇಜು ಸಭಾಂಗಣದಲ್ಲಿ “ಉಲ್ಟಾ ರಾಜ-ಪಲ್ಟಾ ಮಂತ್ರಿ’’ ಎಂಬ ನಾಟಕವನ್ನು ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವೀರಾಜಪೇಟೆಯ ಡಾ. ಎಸ್.ವಿ. ನರಸಿಂಹನ್, ವಿದ್ಯಾರ್ಥಿಗಳು ರಂಗ ಪ್ರಯೋಗದಲ್ಲಿ ಭಾಗವಹಿಸುವ ಮೂಲಕ ಭಾಷೆಗೂ ಮೀರಿದ ಸಂವಹನ ಮಾಧ್ಯಮಗಳನ್ನು ಗ್ರಹಿಸಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಸ್ನಾತಕೋತ್ತರ ಆಂಗ್ಲ ವಿಭಾಗದ ವಿನೂತನ ಕಾರ್ಯಕ್ರಮ ಮುಂದೆಯೂ ವಿದ್ಯಾರ್ಥಿಗಳಿಗೆ ಪುಸ್ತಕದಿಂದ ಆಚೆಗೆ ಇರುವ ಜಗತ್ತಿನ ಆಗು ಹೋಗುಗಳಿಗೆ ಸ್ಪಂದಿಸುವ ಅವಕಾಶ ನೀಡಲಿ ಎಂದು ಆಶಿಸಿದರು. ಕಾರ್ಯಕ್ರಮದಲ್ಲಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲೆ ಡಾ. ಪಾರ್ವತಿ ಅಪ್ಪಯ್ಯ, ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಅಗತ್ಯವಿರುವ ಇಂತಹ ಕಾರ್ಯ ಕ್ರಮಗಳಿಗೆ ಕಾಲೇಜಿನ ಪ್ರೋತ್ಸಾಹ ಸದಾ ಇರುತ್ತದೆ ಎಂದರು.

ಸಾಹಿತ್ಯಾಭ್ಯಾಸವೆಂದರೆ ಸದಾ ಪುಸ್ತಕ ಓದುವದು, ತರಗತಿಗಳಲ್ಲಿ ಉಪನ್ಯಾಸಗಳನ್ನು ಆಲಿಸುವದು, ಸಾಹಿತ್ಯ ಸ್ಪರ್ಧೆಗಳಲ್ಲಿ ಭಾಗವಹಿಸುವದು - ಇವುಗಳಿಗಷ್ಟೇ ಸೀಮಿತವಾಗಿರದೆ ಸಮಾಜದ ಆಗುಹೋಗುಗಳನ್ನು ಗಮನಿಸಿ ಅವುಗಳಿಗೆ ಸ್ಪಂದಿಸುವದು ಕೂಡ ಅತ್ಯಂತ ಅವಶ್ಯಕ. ಈ ಕಾರಣಕ್ಕಾಗಿ ಸಾಹಿತ್ಯದ ವಿದ್ಯಾರ್ಥಿಗಳಿಗೆ ರಂಗಾನುಭವದ ಮೂಲಕ ಲೋಕಾನುಭವ ಮತ್ತು ಸ್ವಾನುಭವದ ಅವಕಾಶ ನೀಡುವ ಸಲುವಾಗಿ ಮಂಗಳೂರು ವಿಶ್ವವಿದ್ಯಾನಿಲಯದ ಪ್ರಾಯೋಜಕತ್ವದಲ್ಲಿ ಸ್ನಾತಕೋತ್ತರ ಆಂಗ್ಲ ವಿಭಾಗದ ವತಿಯಿಂದ ವಿದ್ಯಾರ್ಥಿಗಳಿಗೆ ರಂಗ ತರಬೇತಿ ನೀಡಲಾಯಿತು ಎಂದು ವಿಭಾಗದ ಸಂಯೋಜಕಿ ಡಾ. ನಯನಾ ಕಶ್ಯಪ್ ತಿಳಿಸಿದರು. ವಿದ್ಯಾರ್ಥಿಗಳಿಗೆ ಕಾರ್ಯಾಗಾರ ವನ್ನು ನಡೆಸಿಕೊಟ್ಟ ಬೆಂಗಳೂರಿನ ರಂಗಕರ್ಮಿ ಪ್ರಣೀತ್ ವಿದ್ಯಾರ್ಥಿಗಳಲ್ಲಿರುವ ಸುಪ್ತ ಪ್ರತಿಭೆಯನ್ನು ಅನಾವರಣಗೊಳಿಸಲು ರಂಗ ತರಬೇತಿ ಅತ್ಯಂತ ಸೂಕ್ತ ಮಾಧ್ಯಮ ಎಂದರು. ಸ್ನಾತಕೋತ್ತರ ಆಂಗ್ಲ ವಿಭಾಗದ ಉಪನ್ಯಾಸಕಿ ನೂರ್ ಸಭಾ ಹಾಗೂ ನೂರ್ ಹುದಾ ಕಾರ್ಯಕ್ರಮ ನಿರೂಪಿಸಿ, ಪಿ.ಕೆ. ಶ್ರೀನಿವಾಸ್ ವಂದಿಸಿದರು.