ಮಡಿಕೇರಿ, ಮಾ. 30: ಇಲ್ಲಿನ ಕೈಗಾರಿಕಾ ಬಡಾವಣೆಯಲ್ಲಿರುವ ಮೊಬೈಲ್ ಅಂಗಡಿಯೊಂದರ ಮೇಲೆ ನಿನ್ನೆ ರಾತ್ರಿ ಪುಂಡರು ಧಾಳಿ ನಡೆಸಿ, ಅಂಗಡಿ ಮಾಲೀಕನಿಗೆ ಮನಬಂದಂತೆ ಥಳಿಸಿರುವ ಕೃತ್ಯ ನಡೆದಿದೆ. ‘ವಿವೊಝೆಡ್' ಮೊಬೈಲ್ ಅಂಗಡಿಯ ಜುಬೇರ್ (40) ಎಂಬವರು ಹಲ್ಲೆಗೊಳಗಾಗಿ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.ರಾತ್ರಿ ಸುಮಾರು 9.45 ಗಂಟೆ ಆಸುಪಾಸಿನಲ್ಲಿ ಮೂರ್ನಾಲ್ಕು ಯುವಕರು ಅಂಗಡಿಗೆ ಬಂದು, ಗಂಟೆ ಹತ್ತು ಆಗುತ್ತಿದ್ದರೂ ಯಾಕೆ ಅಂಗಡಿ ಮುಚ್ಚಿಲ್ಲ? ಎಂದು ಪ್ರಶ್ನಿಸಿದ್ದು, ತಾನು ಮುಚ್ಚುತ್ತೇನೆ. ನೀವು ಹೋಗಿ ಎನ್ನುವಷ್ಟರಲ್ಲಿ ನೇರವಾಗಿ ಹಲ್ಲೆ ಮಾಡಿದ್ದಾಗಿ ಜುಬೇರ್ ನೀಡಿರುವ ಪೊಲೀಸ್ ಪುಕಾರಿನಲ್ಲಿ ತಿಳಿಸಿದ್ದಾರೆ.

ಈ ಪುಂಡರ ಗುಂಪಿನ ಒಂದಿಬ್ಬರು ಕೈಗಳಿಂದ ಹೊಡೆದರೆ, ಒಬ್ಬಾತ ಕಬ್ಬಿಣದ ಸರಳುವಿನಿಂದ ತಲೆಭಾಗಕ್ಕೆ ಮಾರಣಾಂತಿಕ ಹಲ್ಲೆ ನಡೆಸಿದ್ದು, ಪ್ರಾಣ ರಕ್ಷಣೆಗಾಗಿ ಜುಬೇರ್ ಪುಂಡರ ಧಾಳಿಯಿಂದ ತಪ್ಪಿಸಿಕೊಂಡು, ಅಂಗಡಿಯೊಳಗೆ ಬಾಗಿಲು ಎಳೆದುಕೊಂಡಿದ್ದಾರೆ.

ಮೊಬೈಲ್ ಅಂಗಡಿಗೆ ಅಳವಡಿಸಿರುವ ಸಿ.ಸಿ. ಕ್ಯಾಮರಾದಲ್ಲಿ ಘಟನೆಯ ದೃಶ್ಯಾವಳಿ ದಾಖಲಾಗಿದ್ದು, ಇದರ ಪರಿಶೀಲನೆಯೊಂದಿಗೆ ನಗರ ಠಾಣಾ ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ. ಹಲ್ಲೆಕೋರರು, ಮೊನ್ನೆಯಷ್ಟೇ ಕನ್ನಂಡಬಾಣೆಯಲ್ಲಿ ನಡೆದಿರುವ ಗೋಕುಲ್ ಎಂಬಾತನ ಕೊಲೆ ಪ್ರಕರಣದಂತೆ ತನ್ನನ್ನು ಕೊಲ್ಲುವದಾಗಿ ಬೆದರಿಕೆಯೊಡ್ಡಿ ದ್ದಾರೆಂದು ಜುಬೇರ್ ಪುಕಾರಿನಲ್ಲಿ ತಿಳಿಸಿದ್ದಾರೆ.

ಮೊಬೈಲ್ ಅಂಗಡಿ ಹಾಗೂ ಮುಂಭಾಗದಲ್ಲಿ ಹಲ್ಲೆ ಸಂದರ್ಭದ ರಕ್ತದ ಕಲೆಗಳು

ಕಂಡುಬಂದವು. ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ ಡಿವೈಎಸ್ಪಿ ಸೋಮಲಿಂಗಪ್ಪ, ಬಿ. ಛಬ್ಬಿ ಹಾಗೂ ಠಾಣಾಧಿಕಾರಿ ಭರತ್ ಮತ್ತು ಪೊಲೀಸರು ಮಹಜರು ನಡೆಸಿ ಆರೋಪಿಗಳ ಬಂಧನಕ್ಕೆ ಮುಂದಿನ ಕ್ರಮ ಕೈಗೊಂಡಿದ್ದಾರೆ.