ಸೋಮವಾರಪೇಟೆ, ಮಾ. 30: ಇಲ್ಲಿಗೆ ಸಮೀಪದ ಐಗೂರು ಗ್ರಾಮದ ಚೋರನ ಹೊಳೆ ಸಮೀಪ ಕಾಡಾನೆ ಧಾಳಿಯಿಂದ ಬಾಳೆ ಫಸಲು ನಷ್ಟ ವಾಗಿರುವ ಕುರಿತು ವರದಿಯಾಗಿದೆ.

ಕಾಡಿನಲ್ಲಿ ಮೇವು ಹಾಗೂ ನೀರಿನ ಕೊರತೆಯಿಂದ ಕಾಡಾನೆಗಳು ಗ್ರಾಮದತ್ತ ಮುಖಮಾಡಿದ್ದು, ಗ್ರಾಮಸ್ಥರು ಮನೆಯಿಂದ ಹೊರಗೆ ಬರಲು ಹೆದರುತ್ತಿದ್ದಾರೆ. ಸಂಜೆಯಾಗುತ್ತಿದ್ದಂತೆ ಕಾಜೂರು ಅರಣ್ಯದಿಂದ ಎಂಟರಿಂದ ಹತ್ತು ಕಾಡಾನೆಗಳು ಟಾಟಾ ಕಾಫಿ ತೋಟದ ಮೂಲಕ ಗ್ರಾಮದತ್ತ ಬರುತ್ತಿವೆ. ಟಾಟಾ ಕಾಫಿ ಸಂಸ್ಥೆಯ ಕಾಫಿ ತೋಟದಲ್ಲಿ ಆನೆಗಳಿಗೆ ನೀರಿನ ವ್ಯವಸ್ಥೆ ಇದ್ದು, ಇದರೊಂದಿಗೆ ಹಲಸಿನ ಹಣ್ಣು ಸಿಗುವದರಿಂದ ಪ್ರತಿ ವರ್ಷ ಇಲ್ಲಿ ಕಾಡಾನೆಗಳು ಬೀಡು ಬಿಡುತ್ತವೆ. ಇದೇ ಸಂದರ್ಭ ಅಕ್ಕ ಪಕ್ಕದ ಗ್ರಾಮಕ್ಕೆ ಧಾಳಿ ಇಡುತ್ತಿದ್ದವು. ಆದರೆ, ಈ ವರ್ಷ ಮನೆಯ ಬಾಗಿಲಿಗೆ ಕಾಡಾನೆಗಳು ಧಾಳಿ ಮಾಡಿ ಕೃಷಿ ಬೆಳೆಗಳನ್ನು ನಾಶ ಮಾಡುತ್ತಿವೆ ಎಂದು ಓಮಣ್ಣ ಗಣೇಶ್ ಹೇಳಿದರು.

ಚೋರನ ಹೊಳೆಯ ಬದಿಯಲ್ಲಿ ಹೆಚ್ಚಿನ ಗ್ರಾಮಸ್ಥರು ವಾಸವಿದ್ದು, ಕಾಡಾನೆಗಳ ಹಾವಳಿಯಿಂದ ಗ್ರಾಮಸ್ಥರು ಭಯಭೀತರಾಗಿದ್ದಾರೆ ಎಂದು ಕಿರಗಂದೂರು ಗ್ರಾಮ ಪಂಚಾಯಿತಿ ಸದಸ್ಯ ಗಣೇಶ್ ಹೇಳಿದರು. ಅರಣ್ಯ ಇಲಾಖೆ ತಕ್ಷಣ ಈ ಬಗ್ಗೆ ಗಮನಹರಿಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು.