ಕುಶಾಲನಗರ, ಮಾ. 30: ಕುಶಾಲನಗರ ಪಟ್ಟಣ ಪಂಚಾಯಿತಿ 2017-18ನೇ ಸಾಲಿನ ಮಾಂಸದ ಮಳಿಗೆ ಹರಾಜು ನಡೆಯಿತು. ಕುರಿ ಮಾಂಸ, ಕೋಳಿ, ಹಸಿ ಮೀನು ಮಳಿಗೆಗಳಿಗೆ ಒಟ್ಟು 26 ಲಕ್ಷದ 13 ಸಾವಿರದ 950 ರೂ.ಗಳಿಗೆ 16 ಮಳಿಗೆಗಳು ಹರಾಜುಗೊಂಡಿವೆ. ಕುಶಾಲನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷ ಎಂ.ಎಂ. ಚರಣ್ ಅಧ್ಯಕ್ಷತೆಯಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ 50 ಕ್ಕೂ ಅಧಿಕ ಬಿಡ್ಡುದಾರರು ಪಾಲ್ಗೊಂಡಿದ್ದರು. ತಲಾ 6 ಕುರಿ, ಕೋಳಿ ಮತ್ತು 4 ಮೀನು ಮಳಿಗೆಗಳ ಹರಾಜಿನಲ್ಲಿ ಪಾಲ್ಗೊಂಡು ಹೆಚ್ಚಿನ ಮೊತ್ತಕ್ಕೆ ಬಿಡ್ಡು ನಡೆದು ಅಧಿಕ ಆದಾಯ ಗಳಿಸುವಂತಾಯಿತು.
ಕಳೆದ 2014 ರಿಂದ 17ರ ಸಾಲಿನ 3 ವರ್ಷಗಳಲ್ಲಿ ಸಂತೆ ಶುಲ್ಕ ಸೇರಿ 36 ಲಕ್ಷ ರೂ.ಗಳಿಗೆ ಹರಾಜು ನಡೆದಿತ್ತು. ಈ ಬಾರಿ ಸಂತೆ ಶುಲ್ಕ ಎತ್ತುವಳಿ ಪ್ರಕ್ರಿಯೆ ಕಾರಣಾಂತರಗಳಿಂದ ಮುಂದೂಡಲ್ಪಟ್ಟಿತು. ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಟಿ.ಆರ್. ಶರವಣಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ಹೆಚ್.ಎಂ. ಮಧುಸೂದನ್, ಸುರಯ್ಯಭಾನು, ಮುಖ್ಯಾಧಿಕಾರಿ ಎ.ಎಂ. ಶ್ರೀಧರ್ ಹಾಗೂ ಸರ್ವ ಸದಸ್ಯರುಗಳ ಉಪಸ್ಥಿತಿಯಲ್ಲಿ ಹರಾಜು ಪ್ರಕ್ರಿಯೆ ನಡೆಯಿತು.