ಮಡಿಕೇರಿ, ಮಾ. 30: ಕೊಡಗು ಜಿಲ್ಲೆಯಲ್ಲಿ 2011ರ ಜನಗಣತಿ ಪ್ರಕಾರ ಒಟ್ಟು 75669 ಜನರಿಗೆ ವಸತಿ ಇರುವದಿಲ್ಲ ಎಂದು ಕರ್ನಾಟಕ ರಾಜ್ಯ ವಸತಿ ಸಚಿವ ಎಂ. ಕೃಷ್ಣಪ್ಪ ತಿಳಿಸಿದ್ದಾರೆ.
ಮೇಲ್ಮನೆ ಸದಸ್ಯೆ ವೀಣಾ ಅಚ್ಚಯ್ಯ ಅವರ ಪ್ರಶ್ನೆಗೆ ಸದನದಲ್ಲಿ ಈ ಕುರಿತು ಮಾಹಿತಿ ನೀಡಿರುವ ವಸತಿ ಸಚಿವರು ಈ ಕೆಳಗಿನಂತೆ ಅಂಕಿ - ಅಂಶ ನೀಡಿದ್ದಾರೆ.
2011ರ ಸಾಮಾಜಿಕ ಮತ್ತು ಆರ್ಥಿಕ ಜಾತಿ ಜನಗಣತಿ ಪ್ರಕಾರ ಕೊಡಗು ಜಿಲ್ಲೆಯಲ್ಲಿ ವಸತಿ ರಹಿತರು, ಕಚ್ಚಾಮನೆ, ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವವರನ್ನು ಒಳಗೊಂಡಂತೆ ಗ್ರಾಮೀಣ ಪ್ರದೇಶದಲ್ಲಿ 65.310 ಹಾಗೂ ನಗರ ಪ್ರದೇಶದಲ್ಲಿ 10,359 ಮಂದಿ ಒಟ್ಟಾರೆಯಾಗಿ 75,669 ವಸತಿ ರಹಿತರು ಜಿಲ್ಲೆಯಲ್ಲಿ ಕಂಡುಬಂದಿ ರುತ್ತಾರೆ.
ಸದರಿ ವಸತಿ ರಹಿತರಲ್ಲಿ ಬಡತನ ರೇಖೆಗಿಂತ ಕೆಳಗಿನ ಹಾಗೂ ಮೇಲಿನ ವರ್ಗದವರು ಸೇರಿರುತ್ತಾರೆ ಎಂದು ಸಚಿವರು ಉತ್ತರಿಸಿದ್ದಾರೆ.
ಗುಡಿಸಲು ವಾಸಿಗಳು ಒಳಗೊಂಡಂತೆ ವಸತಿ ರಹಿತರಿಗೆ ವಸತಿ ಸೌಕರ್ಯವನ್ನು ಕಲ್ಪಿಸಲು ಈ ಕೆಳಕಂಡ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ಬಸವ ವಸತಿ ಯೋಜನೆ, ಪ್ರಧಾನ ಮಂತ್ರಿ ಆವಾಸ್ ಯೋಜನೆಯು ಗ್ರಾಮೀಣ ಮತ್ತು ನಗರ ಪ್ರದೇಶಗಳಿಗೆ, ಡಾ. ಬಿ.ಆರ್. ಅಂಬೇಡ್ಕರ್ ನಿವಾಸ್ ಯೋಜನೆ ಕೂಡ ಗ್ರಾಮೀಣ ಮತ್ತು ನಗರ ಪ್ರದೇಶಗಳನ್ನು ಒಳಗೊಂಡಿದೆ. ದೇವರಾಜ್ ಅರಸು ಯೋಜನೆ ಗ್ರಾಮೀಣ ಮತ್ತು ನಗರ ಹಾಗೂ ವಾಜಪೇಯಿ ನಗರ ವಸತಿ ಯೋಜನೆಯಡಿ ವಸತಿ ರಹಿತರಿಗೆ ಆಸರೆ ಕಲ್ಪಿಸಲಾಗುತ್ತಿದೆ ಎಂದು ಸಚಿವರು ವಿವರಿಸಿದ್ದಾರೆ.
9314 ಮನೆ ನೀಡಿದೆ
ಪ್ರತಿ ವರ್ಷ ವಿವಿಧ ವಸತಿ ಯೋಜನೆಗಳಡಿ 3 ಲಕ್ಷ ಮನೆಗಳನ್ನು ನಿರ್ಮಾಣ ಮಾಡುವದರ ಮೂಲಕ ರಾಜ್ಯವನ್ನು ಗುಡಿಸಲು ಮುಕ್ತ ರಾಜ್ಯವನ್ನಾಗಿಸುವ ಉದ್ದೇಶವನ್ನು ಹೊಂದಿರುತ್ತದೆ.
ಅದರಂತೆ ಕೊಡಗು ಜಿಲ್ಲೆಯಲ್ಲಿ ಪ್ರಗತಿಯಲ್ಲಿದ್ದ ಹಾಗೂ ಹೊಸದಾಗಿ ಮಂಜೂರಾತಿ ನೀಡಲಾದ ಮನೆಗಳನ್ನು ಒಳಗೊಂಡಂತೆ 2013-14ರಿಂದ ಫೆಬ್ರವರಿ 2017ರ ಅಂತ್ಯಕ್ಕೆ ಗ್ರಾಮೀಣ ಪ್ರದೇಶದಲ್ಲಿ 9097 ಹಾಗೂ ನಗರ ಪ್ರದೇಶದಲ್ಲಿ 217 ಒಟ್ಟಾರೆಯಾಗಿ 9314 ಮನೆಗಳನ್ನು ನಿರ್ಮಾಣ ಮಾಡಿ ಗುಡಿಸಲು ವಾಸಿಗಳನ್ನು ಒಳಗೊಂಡಂತೆ ವಸತಿ ರಹಿತರಿಗೆ ಹಂಚಲಾಗಿದೆ ಎಂದು ಕೃಷ್ಣಪ್ಪ ಮಾಹಿತಿ ನೀಡಿದ್ದಾರೆ.
ಸರ್ಕಾರವು ಪ್ರತಿವರ್ಷ ಆಯವ್ಯಯದಲ್ಲಿ ಒದಗಿಸಲಾಗುವ ಅನುದಾನಕ್ಕೆ ಅನುಗುಣವಾಗಿ ನೀಡಲಾಗುವ ಗುರಿಯಲ್ಲಿ ಗುಡಿಸಲು ವಾಸಿಗಳನ್ನು ಒಳಗೊಂಡಂತೆ ಎಲ್ಲಾ ಅರ್ಹ ವಸತಿ ರಹಿತರಿಗೆ ವಸತಿ ಸೌಕರ್ಯ ಕಲ್ಪಿಸಲಾಗುವದು.
2003-04ನೇ ಸಾಲಿನಲ್ಲಿ ರಾಜ್ಯಾದ್ಯಂತ ವಸತಿ, ನಿವೇಶನ ರಹಿತರ ಸಮೀಕ್ಷೆಯನ್ನು ನಡೆಸಲಾಗಿದ್ದು, ಸದರಿ ಸಮೀಕ್ಷೆಯ ಪ್ರಕಾರ ಕೊಡಗು ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ 11,182 ಹಾಗೂ ನಗರ ಪ್ರದೇಶದಲ್ಲಿ 1,765 ಒಟ್ಟಾರೆಯಾಗಿ 12,947 ನಿವೇಶನ ರಹಿತರಿರುವದು ಕಂಡು ಬಂದಿರುತ್ತದೆ ಎಂದು ಅವರು ವಿವರಣೆ ನೀಡಿದ್ದಾರೆ.
ರಾಜ್ಯ ಸರ್ಕಾರದಿಂದ ನಿವೇಶನ ಕಲ್ಪಿಸಲು ಗ್ರಾಮೀಣ ನಿವೇಶನ ಯೋಜನೆಯನ್ನು ಅನುಷ್ಠಾನ ಗೊಳಿಸಲಾಗುತ್ತಿದೆ. ಸದರಿ ಯೋಜನೆಯಡಿಯಲ್ಲಿ ವಸತಿ ಯೋಗ್ಯ ಸರ್ಕಾರಿ ಜಮೀನು ಲಭ್ಯವಿಲ್ಲದಿದ್ದಲ್ಲಿ, ಖಾಸಗಿ ಜಮೀನನ್ನು ಖರೀದಿಸಲು ಅವಕಾಶ ಇರುತ್ತದೆ.
ಸರ್ಕಾರಿ ಜಮೀನು ಲಭ್ಯವಿದ್ದಲ್ಲಿ ಅಥವಾ ಖಾಸಗಿ ಜಮೀನನ್ನು ಖರೀದಿಸಿದ್ದಲ್ಲಿ, ಸದರಿ ಜಮೀನನ್ನು ಅಭಿವೃದ್ಧಿಪಡಿಸಿ, ನಿವೇಶನಗಳನ್ನು ಕೊಡಗು ಜಿಲ್ಲೆಯಲ್ಲಿ ಸಾಮಾನ್ಯ ವರ್ಗದವರಿಂದ ಮನೆ ನಿರ್ಮಾಣಕ್ಕೆ ಬೇಡಿಕೆ ಹೆಚ್ಚಿರುವದು ಗಮನಕ್ಕೆ ಬಂದಿದ್ದು, ಇದು ಸರ್ಕಾರದ ಪರಿಶೀಲನೆಯಲ್ಲಿದೆ ಎಂದು ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಪ್ರಶ್ನೆಗೆ ವಸತಿ ಸಚಿವರು ಉತ್ತರಿಸಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಕೆಲವು ಗ್ರಾಮ ಪಂಚಾಯಿತಿಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರು ಕಡಿಮೆಯಿದ್ದು, ಸಾಮಾನ್ಯ ವರ್ಗದವರು ಹೆಚ್ಚಾಗಿದ್ದಲ್ಲಿ ಅವರಿಗೆ ಮನೆ ನಿರ್ಮಾಣಕ್ಕೆ ಹೆಚ್ಚುವರಿ ಬೇಡಿಕೆ ಸರಕಾರಕ್ಕೆ ಬಂದಿದೆಯೇ... ಬಂದಿದ್ದಲ್ಲಿ ಇದಕ್ಕೆ ಸರಕಾರ ಕೈಗೊಂಡಿರುವ ಕ್ರಮ ಏನೆಂದು ಸುನೀಲ್ ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ವಸತಿ ಸಚಿವ ಎಂ. ಕೃಷ್ಣಪ್ಪ ಅವರು ಸಾಮಾಜಿಕ ಆರ್ಥಿಕ ಜನಗಣತಿಯಲ್ಲಿ 2011ರ ವರದಿಯ ಅಂಕಿ - ಅಂಶಗಳ ಪ್ರಕಾರ ಕೊಡಗು ಜಿಲ್ಲೆಯಲ್ಲಿ ಸಾಮಾನ್ಯ ವರ್ಗದವರ ಬೇಡಿಕೆ ಹೆಚ್ಚಾಗಿರುವದು ಸರಕಾರದ ಗಮನಕ್ಕೆ ಬಂದಿದ್ದು, ಇದು ಪರಿಶೀಲನೆಯಲ್ಲಿದೆ ಎಂದು ತಿಳಿಸಿದ್ದಾರೆ. ಆದರೆ ಪರಿಶಿಷ್ಟ ಜಾತಿ ಮತ್ತು ವರ್ಗಕ್ಕೆ ಮನೆ ನಿರ್ಮಾಣಕ್ಕೆ ಬಿಡುಗಡೆಯಾದ ಅನುದಾನದಲ್ಲಿ ಉಳಿಕೆಯಾಗಿದ್ದಲ್ಲಿ ಇದನ್ನು ಸಾಮಾನ್ಯ ವರ್ಗದವರಿಗೆ ಮನೆ ನಿರ್ಮಿಸಲು ವಸತಿ ಯೋಜನೆಗಳ ಮಾರ್ಗಸೂಚಿ ಪ್ರಕಾರ ಅವಕಾಶ ಇರುವದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. 2013-14ನೇ ಸಾಲಿನಿಂದ ವಿವಿಧ ವಸತಿ ಯೋಜನೆಗಳಡಿ 7,969 ಮನೆಗಳ ಗುರಿ ಮಂಜೂರು ಮಾಡಲಾಗಿದೆ. ಪರಿಶಿಷ್ಟ ಜಾತಿಗೆ 3075, ಪಂಗಡಕ್ಕೆ 1918, ಸಾಮಾನ್ಯ 2,115, ಅಲ್ಪಸಂಖ್ಯಾತರಿಗೆ 861 ಸೇರಿದಂತೆ ಒಟ್ಟು 7969 ಮನೆ ನಿರ್ಮಾಣಕ್ಕೆ ಮಂಜೂರಾತಿ ನೀಡಲಾಗಿದೆ ಎಂದು ವಸತಿ ಸಚಿವರು ತಿಳಿಸಿದ್ದಾರೆ.ಉಳಿದ ನಿವೇಶನ ರಹಿತರಿಗೆ ಜಮೀನು ಲಭ್ಯತೆಗೆ ಅನುಗುಣವಾಗಿ, ಹಂತ ಹಂತವಾಗಿ ನಿವೇಶನ ಕಲ್ಪಿಸಲಾಗುವದು ಎಂದು ಸಚಿವರು ಭರವಸೆ ನೀಡಿದ್ದಾರೆ.
ಮಹಿಳಾ ಉದ್ಯಮ
ಕೊಡಗು ಜಿಲ್ಲೆಯಲ್ಲಿ ವಿವಿಧ ಯೋಜನೆಗಳಡಿ, ಕಳೆದ ಐದು ವರ್ಷಗಳಿಂದ ಸರಕಾರದ ಸಹಾಯಧನದೊಂದಿಗೆ ಇದುವರೆಗೆ 48 ಮಹಿಳಾ ಉದ್ಯಮಗಳು ಕೆಲಸ ನಿರ್ವಹಿಸುತ್ತಿದೆ ಎಂಬದಾಗಿ ವೀಣಾ ಅಚ್ಚಯ್ಯ ಅವರ ಮತ್ತೊಂದು ಪ್ರಶ್ನೆಗೆ, ಸಣ್ಣ ಕೈಗಾರಿಕಾ ಸಚಿವ ರಮೇಶ್ ಜಾರಕಿಹೊಳಿ ಉತ್ತರಿಸಿದ್ದಾರೆ.
ಜಿಲ್ಲೆಯ ವಿದ್ಯಾಲಯಗಳು
ಸದನದಲ್ಲಿ ವೀಣಾ ಅವರ ಇನ್ನೊಂದು ಪ್ರಶ್ನೆಗೆ ರಾಜ್ಯ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಅವರು, ಜಿಲ್ಲೆಯಲ್ಲಿ ಉನ್ನತ ಪದವಿ ವಿದ್ಯಾಲಯಗಳು ಒಟ್ಟು 21 ಕಾರ್ಯನಿರ್ವಹಿಸುತ್ತಿವೆ ಎಂದು ಉತ್ತರಿಸಿದ್ದಾರೆ.
ಈ ಪೈಕಿ ಸರಕಾರಿ ಪದವಿ ಕಾಲೇಜುಗಳು 6, ಮಂಗಳೂರು ವಿವಿ ಘಟಕ 1 ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ 1 ಸೇರಿದಂತೆ, 10 ಖಾಸಗಿ ಕಾಲೇಜುಗಳು ಹಾಗೂ 2 ಅನುದಾನಿತ ಖಾಸಗಿ ಪ್ರಥಮ ದರ್ಜೆ ಕಾಲೇಜುಗಳು ಇದ್ದು, 78 ಬೋಧಕ ಸಿಬ್ಬಂದಿ ಹಾಗೂ 62 ಬೋಧಕೇತರ ಹುದ್ದೆಗಳು ಮಂಜೂರಾಗಿವೆ ಎಂದು ಮಾಹಿತಿ ನೀಡಿದ್ದಾರೆ.