ಗೋಣಿಕೊಪ್ಪಲು, ಮಾ. 30: ಕಾರ್ಯಕರ್ತರಿಗೆ ಸಮಾನ ಅವಕಾಶ ನೀಡುವ ಮೂಲಕ ನಗರ ಕಾಂಗ್ರೆಸ್ ಸಮಿತಿ ರಚನೆ ಮಾಡಲಾಗಿದೆ ಎಂದು ಗೋಣಿಕೊಪ್ಪ ನಗರ ಕಾಂಗ್ರೆಸ್ ಅಧ್ಯಕ್ಷ ಮಳವಂಡ ಅರವಿಂದ್ ಕುಟ್ಟಪ್ಪ ತಿಳಿಸಿದ್ದಾರೆ.ರಾಜ್ಯ ಸರ್ಕಾರದ ಜನಪರ ಕಾರ್ಯಕ್ರಮಗಳನ್ನು ಜನರಿಗೆ ಮುಟ್ಟಿಸುವ ಉದ್ದೇಶ ಹಾಗೂ ವಿಧಾನಸಭಾ ಚುನಾವಣೆಗೆ ಗ್ರಾಮ ಮಟ್ಟದಲ್ಲಿ ಪಕ್ಷವನ್ನು ಸದೃಢಗೊಳಿಸಲು ಎಲ್ಲಾ ವರ್ಗದ ಕಾರ್ಯಕರ್ತರಿಗೆ ಸ್ಥಾನ ನೀಡಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ನಗರ ಕಾಂಗ್ರೆಸ್‍ನ ಉಪಾಧ್ಯಕ್ಷರಾಗಿ ಲಕ್ಷ್ಮಣ್, ಕೆ.ಪಿ. ಸಲಾಂ, ಎಂ.ಕೆ. ಅಜಯ್ ಕುಮಾರ್, ಮಹಿಳಾ ಉಪಾಧ್ಯಕ್ಷರನ್ನಾಗಿ ಪದ್ಮಿನಿ ಶಶಿಧರ್, ಶೀಬಾ, ಜಯಶ್ರಿ, ಖಜಾಂಚಿಯಾಗಿ ಮಾಚಿಮಂಡ ಅಪ್ಪಯ್ಯ, ಪ್ರಧಾನ ಕಾರ್ಯದರ್ಶಿ ಗಳಾಗಿ ಸತೀಶ್ ಸಿಂಗಿ, ಜಿ.ಎಸ್. ಸೂರ್ಯ, ಅಜ್ಜಿಕುಟ್ಟೀರ ತಿಮ್ಮಯ್ಯ, ಮಹಿಳಾ ಕಾರ್ಯದರ್ಶಿಗಳಾಗಿ ಸೌಮ್ಯ ಬಾಲು, ರಮಾವತಿ, ಪ್ರಭಾವತಿ, ಸಲಹೆಗಾರರಾಗಿ ಕೊಳ್ಳಿಮಾಡ ಅಜಿತ್ ಕರುಂಬಯ್ಯ, ಕಾನೂನು ಸಲಹೆಗಾರರಾಗಿ ಮಾಯಣಮಾಡ ಕಾಶಿಯಪ್ಪ ಅವರನ್ನು ನೇಮಿಸಲಾಗಿದೆ ಜತೆಗೆ ಹಲವು ಕಾರ್ಯಕರ್ತರನ್ನು ಸಮಿತಿಯಲ್ಲಿ ಸೇರಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಆರೋಪ: ಇಲ್ಲಿನ ಗ್ರಾಮ ಪಂಚಾಯಿತಿಯಲ್ಲಿ ಅಭಿವೃದ್ಧಿ ಕುಂಠಿತಗೊಂಡಿದ್ದು ಇದಕ್ಕೆ ಅಧ್ಯಕ್ಷೆ ಸೆಲ್ವಿ ನೇರ ಹೊಣೆ. ಜನಪರ ಕಾರ್ಯಗಳಿಗೆ ಒತ್ತು ನೀಡದೆ ನಿರ್ಲಕ್ಷ್ಯದಿಂದ ಪಟ್ಟಣದಲ್ಲಿ ದಿನನಿತ್ಯ ಸಮಸ್ಯೆ ಹೆಚ್ಚಾಗುತ್ತಿದೆ.

ವಾಸ್ತು ಹೆಸರಿನಲ್ಲಿ ಅಧ್ಯಕ್ಷೆಯ ಕೋಣೆಯನ್ನು ಅನುಮತಿ ಪಡೆಯದೆ ಕೆಡವಲಾಗಿದೆ. ಪಿಡಿಓ ಮತ್ತು ಇಒ ಇವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ನಗರ ಕಾಂಗ್ರೆಸ್ ಉಪಾಧ್ಯಕ್ಷೆ ಪದ್ಮಿನಿ ಶಶಿಧರ್ ಮಾತನಾಡಿ, ಇತ್ತೀಚೆಗೆ ನಡೆದ ಗ್ರಾ.ಪಂ. ತುರ್ತು ಸಭೆಯಲ್ಲಿ ಕೋಣೆ ಕೆಡವಿದ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಅಧ್ಯಕ್ಷೆ ಸೆಲ್ವಿ ಹಾಸ್ಯಾಸ್ಪದ ಹೇಳಿಕೆ ನೀಡಿದ್ದಾರೆ. ಸಮಸ್ಯೆಗಳನ್ನು ಬಗೆಹರಿಸಬೇಕಾದ ಅಧ್ಯಕ್ಷೆಯೇ ಸಮಸ್ಯೆ ಉಂಟು ಮಾಡುತ್ತಿದ್ದಾರೆ. ಈ ಬಗ್ಗೆ ಜಿಲ್ಲಾ ಕಾರ್ಯ ನಿರ್ವಹಣಾಧಿಕಾರಿಗಳ ಗಮನಕ್ಕೆ ತರಲಾಗಿದೆ ಎಂದರು.

ಉಸ್ತುವಾರಿ ಸಚಿವರು ಕೂಡ ಸೆಲ್ವಿ ವಿರುದ್ಧ ಕ್ರಮಕ್ಕೆ ಕಾರ್ಯನಿರ್ವಹಣಾಧಿಕಾರಿಗಳಿಗೆ ಪತ್ರ ವ್ಯವಹಾರ ಮಾಡಿದ್ದಾರೆ ಎಂದು ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕಾಡ್ಯಮಾಡ ಚೇತನ್ ಹೇಳಿದರು.

ಗೋಷ್ಠಿಯಲ್ಲಿ ನಗರ ಕಾಂಗ್ರೆಸ್ ಪ್ರ.ಕಾರ್ಯದರ್ಶಿ ಅಬ್ದುಲ್ ಸಲಾಂ, ಕಾರ್ಯಕರ್ತ ಕೊಂಗಂಡ ಮನೋಜ್ ಉಪಸ್ಥಿತರಿದ್ದರು.