ಮಡಿಕೇರಿ, ಮಾ. 30: ಕೇಂದ್ರ ಸರಕಾರ ವಾಹನದ ವಿಮೆ, ಎಫ್‍ಸಿ ದರ ಏರಿಕೆ ಮಾಡಿರುವದನ್ನು ವಿರೋಧಿಸಿ ರಾಷ್ಟ್ರಾದ್ಯಂತ ಹಮ್ಮಿ ಕೊಂಡಿರುವ ಲಾರಿ ಮುಷ್ಕರಕ್ಕೆ ಜಿಲ್ಲೆಯಲ್ಲಿ ಕೂಡ ಬೆಂಬಲ ವ್ಯಕ್ತಗೊಂಡಿತು. ಲಾರಿ ಮಾಲೀಕರ ಸಂಘ, ಪ್ರವಾಸಿ ವಾಹನ ಚಾಲಕರು, ಮಾಲೀಕರ ಸಂಘ, ಗೂಡ್ಸ್ ಆಟೋ ಮಾಲೀಕರ ಸಂಘ, ಕೊಡಗು ಜಿಲ್ಲಾ ಆಟೋ ಮಾಲೀಕರ-ಚಾಲಕರ ಸಂಘದವರು ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿ ಬೇಡಿಕೆಗಳನ್ನು ಈಡೇರಿಸುವಂತೆ ಜಿಲ್ಲಾಧಿಕಾರಿಗಳ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.ಗೋಣಿಕೊಪ್ಪದಲ್ಲಿ ಮೆರವಣಿಗೆ

ಟ್ಯಾಕ್ಸಿಗಳ ಮೇಲೆ ಶೇ. 30 ರಷ್ಟು ವಿದಿಸಿರುವ ಪ್ರಿಮೀಯರ್ ದರವನ್ನು ಇಳಿಸುವಂತೆ ರಾಷ್ಟ್ರವ್ಯಾಪ್ತಿ ನಡೆಯುತ್ತಿರುವ ಪ್ರತಿಭಟನೆಗೆ ಇಲ್ಲಿನ ವಾಹನ ಚಾಲಕರು ಬೆಂಬಲ ವ್ಯಕ್ತಪಡಿಸಿದರು.

ಗೋಣಿಕೊಪ್ಪಲು ಉಮಾಮಹೇಶ್ವರಿ ದೇವಾಲಯದಿಂದ ಬಸ್ ನಿಲ್ದಾಣ ದವರಗೆ ಮೆರವಣಿಗೆ ನಡೆಸಿ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ವಾಹನ ಚಾಲಕರ ಹಾಗೂ ಮಾಲೀಕರ ಸಂಘದ ಅಧ್ಯಕ್ಷ ಸಿ.ಕೆ ಬೋಪಣ್ಣ ಮಾತನಾಡಿ, ವಾಹನ ಚಾಲಕರು ಆರ್ಥಿಕವಾಗಿ ಸಂಕಷ್ಟದಲ್ಲಿದ್ದು. ಸರ್ಕಾರ ಈ ರೀತಿ ತೆರಿಗೆ ವಿಧಿಸುವ ಮೂಲಕ ಮತ್ತಷ್ಟು ಹೊರೆ ಹೊರಿಸಿದ್ದಾರೆ. ಆರ್‍ಟಿಒ ಶುಲ್ಕ ಹಾಗೂ ಹೊರ ರಾಜ್ಯಗಳ ಪರ್ಮಿಟ್ ದರವನ್ನು ಹೆಚ್ಚಿಸುವ ಮೂಲಕ ಚಾಲಕರು

(ಮೊದಲ ಪುಟದಿಂದ) ಸಂಕಷ್ಟ ಸಿಲುಕಿದಂತಾಗಿದೆ ಎಂದರು.

ಚಾಲಕರಿಗೆ ಕೆಲಸ ಕಡಿಮೆಯಿದ್ದು ಶೇ. 15 ಸೇವಾ ಶುಲ್ಕವನ್ನು ಹೆಚ್ಚಿಸುವ ಮೂಲಕ ಗಾಯದ ಮೇಲೆ ಬರೆ ಎಳೆದಂತೆ ಮಾಡಿದೆ ಎಂದು ವಾಹನ ಚಾಲಕರ ಹಾಗೂ ಮಾಲೀಕರ ಸಂಘದ ಉಪಾಧ್ಯಕ್ಷ ಶರತ್ ಕಾಂತ್ ಹೇಳಿದರು.

ಗ್ರಾ.ಪಂ. ಅಧ್ಯಕ್ಷೆ ಸೆಲ್ವಿ ಅವರಿಗೆ ಲಿಖಿತ ಮನವಿ ಸಲ್ಲಿಸಲಾಯಿತು. ಈ ಸಂದರ್ಭ ತಾ.ಪಂ ಸದಸ್ಯ ಜಯಪೂವಯ್ಯ, ಆಟೋ ಚಾಲಕರ ಸಂಘದ ಉಪಾಧ್ಯಕ್ಷ ಜಪ್ಪು ಸುಬ್ಬಯ್ಯ, ವ್ಯಾನ್ ಚಾಲಕರ ಸಂಘದ ಉಪಾಧ್ಯಕ್ಷ ಬಿ.ಆರ್ ಬಾಬು ಸೇರಿದಂತೆ ನೂರಾರು ಚಾಲಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಕುಶಾಲನಗರಕ್ಕೆ ಲಾರಿ ಮುಷ್ಕರ ಬಿಸಿ

ದೇಶದಾದ್ಯಂತ ನಡೆಯುತ್ತಿರುವ ಲಾರಿ ಮತ್ತು ಸರಕು ಸಾಗಣೆ ವಾಹನಗಳ ಅನಿರ್ದಿಷ್ಟಾವಧಿ ಮುಷ್ಕರದ ಹಿನ್ನೆಲೆಯಲ್ಲಿ ಕುಶಾಲನಗರದಲ್ಲಿ ಸ್ಥಳೀಯ ಕಾವೇರಿ ಲಾರಿ ಮಾಲೀಕರ ಸಂಘ, ಮಿನಿ ಲಾರಿ ಚಾಲಕರು, ಮಾಲೀಕರ ಸಂಘದ ನೇತೃತ್ವದಲ್ಲಿ ಸರಕು ಸಾಗಣೆ ವಾಹನಗಳು ಸಂಚಾರ ಸ್ಥಗಿತಗೊಳಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ನಡೆಯುತ್ತಿರುವ ಈ ಮುಷ್ಕರ ಬೇಡಿಕೆ ಈಡೇರುವ ತನಕ ಮುಂದುವರೆಯಲಿದೆ ಎಂದು ಕಾವೇರಿ ಲಾರಿ ಮಾಲೀಕರ ಸಂಘದ ಅಧ್ಯಕ್ಷÀ ಜಿ.ಸಿ. ನಾಗರಾಜ್ ತಿಳಿಸಿದ್ದಾರೆ. ಕುಶಾಲನಗರ ಮಾರುಕಟ್ಟೆ ಆವರಣದಲ್ಲಿ ಪ್ರತಿಭಟನೆಯಲ್ಲಿ ತೊಡಗಿರುವ ಸಂಘದ ಸದಸ್ಯರು ತಮ್ಮ ಲಾರಿ ಮತ್ತು ಇತರ ಸರಕು ಸಾಗಣೆ ವಾಹನಗಳನ್ನು ನಿಲ್ಲಿಸಿ ಪ್ರತಿಭಟನೆಯಲ್ಲಿ ತೊಡಗಿದ್ದಾರೆ. ಕುಶಾಲನಗರ ಮೂಲಕ ತೆರಳುವ ಸರಕು ಸಾಗಣೆ ವಾಹನಗಳನ್ನು ತಡೆದು ಸ್ವಲ್ಪಕಾಲ ನಿಲ್ಲಿಸಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಒತ್ತಾಯಿಸುತ್ತಿದ್ದ ದೃಶ್ಯ ಕಂಡುಬಂತು. ಸರಕು ಸಾಗಣೆ ವಾಹನಗಳ ಸಂಚಾರ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ವ್ಯಾಪಾರ ವಹಿವಾಟಿನಲ್ಲಿ ಅಲ್ಪಸ್ವಲ್ಪ ಏರುಪೇರು ಉಂಟಾಗಿ ಲಾರಿ ಮುಷ್ಕರ ಬಿಸಿ ತಟ್ಟಿತು.