ಸೋಮವಾರಪೇಟೆ, ಮಾ. 30: ಯುಗಾದಿ ಹಬ್ಬದ ಅಂಗವಾಗಿ ಸಮೀಪದ ಗೌಡಳ್ಳಿ ಹಿಂದೂ ಗೆಳೆಯರ ಬಳಗದ ಆಶ್ರಯದಲ್ಲಿ ಗೌಡಳ್ಳಿ ಬಿ.ಜಿ.ಎಸ್. ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದ್ದ ‘ಹಿಂದೂ ಫುಟ್ಬಾಲ್ ಕಪ್’ ಪ್ರಶಸ್ತಿಯನ್ನು ಸೋಮವಾರಪೇಟೆ ಡಾಲ್ಫಿನ್ಸ್ ಸ್ಪೋಟ್ರ್ಸ್ ಕ್ಲಬ್ ಮುಡಿಗೇರಿಸಿ ಕೊಂಡಿದ್ದು, ರೂ. 1ಲಕ್ಷ ನಗದಿನೊಂದಿಗೆ ಆಕರ್ಷಕ ಪಾರಿತೋಷಕವನ್ನು ತನ್ನದಾಗಿಸಿ ಕೊಂಡಿತು.ಫೈನಲ್ನಲ್ಲಿ ಉತ್ತಮ ಆಟ ಪ್ರದರ್ಶಿಸಿದರೂ ಬಲಿಷ್ಠ ಡಾಲ್ಫಿನ್ಸ್ ಎದುರು ಸೋಲೊಪ್ಪಿಕೊಂಡ ಫ್ರೆಂಡ್ಸ್ ಗೌಡಳ್ಳಿ ಸ್ಪೋಟ್ರ್ಸ್ ಕ್ಲಬ್ ತಂಡ ದ್ವಿತೀಯ ಸ್ಥಾನ ಪಡೆದು ರೂ. 50 ಸಾವಿರ ನಗದು ಬಹುಮಾನದೊಂದಿಗೆ ರನ್ನರ್ ಆಪ್ ಟ್ರೋಫಿಗೆ ಭಾಜನವಾಯಿತು.
ಐವರಿಕೋಸ್ಟ್ ವಿದೇಶಿ ಮೂಲದ ಆಟಗಾರರಿದ್ದ ಡಾಲ್ಫಿನ್ಸ್ ಸ್ಪೋಟ್ರ್ಸ್ ಕ್ಲಬ್ ತಂಡ ಫೈನಲ್ನಲ್ಲಿ ಅಮೋಘ ಆಟ ಪ್ರದರ್ಶಿಸಿ 4-1 ಗೋಲುಗಳ ಅಂತರದಿಂದ ಜಯಗಳಿಸಿತು. ಬಹುತೇಕ ಸ್ಥಳೀಯ ಆಟಗಾರರನ್ನೇ ಹೊಂದಿರುವ ಫ್ರೆಂಡ್ಸ್ ಕ್ಲಬ್ ಗೌಡಳ್ಳಿ ತಂಡವನ್ನು ನಿರಾಯಾಸವಾಗಿ ಸೋಲಿಸಿ, ಒಂದು ಲಕ್ಷ ರೂ.ನಗದು ಬಹುಮಾನದೊಂದಿಗೆ ಟ್ರೋಫಿಯನ್ನು ಪಡೆಯಿತು.
(ಮೊದಲ ಪುಟದಿಂದ) ವಿಜೇತ ತಂಡ 4 ಗೋಲುಗಳನ್ನು ಗಳಿಸಿದರೆ, ರನ್ನರ್ ಆಪ್ ಆದ ಫ್ರೆಂಡ್ಸ್ ಗೌಡಳ್ಳಿ ತಂಡ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಒಂದು ಗೋಲನ್ನು ಗಳಿಸುವಲ್ಲಿ ಶಕ್ತವಾಯಿತು. ಮೈದಾನದಲ್ಲಿ ಮಿಂಚಿನ ಆಟ ಪ್ರದರ್ಶಿಸಿದ ಡಾಲ್ಫೀನ್ಸ್ನ ವಿದೇಶಿ ಆಟಗಾರ ಡೇವಿಡ್ ನಾಲ್ಕು ಗೋಲು ಗಳಿಸಿ, ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಗೌಡಳ್ಳಿ ವೇಣುಗೋಪಾಲ್ ಒಂದು ಗೋಲು ಗಳಿಸಿದರು.
ಮೊದಲ ಸೆಮಿಫೈನಲ್ನಲ್ಲಿ ಚಿಕ್ಕಮಗಳೂರು ಕಾಫಿ ಲ್ಯಾಂಡ್ ತಂಡವನ್ನು ಫ್ರೆಂಡ್ಸ್ ಗೌಡಳ್ಳಿ ತಂಡ 3-0 ಗೋಲುಗಳ ಅಂತರದಲ್ಲಿ ಮಣಿಸಿತು. ಗೌಡಳ್ಳಿ ತಂಡದ ಜುನೈದ್ 15,28,38, ನಿಮಿಷದಲ್ಲಿ ಹ್ಯಾಟ್ರಿಕ್ ಗೋಲು ಗಳಿಸಿದರು.
ಎರಡನೇ ಸೆಮಿಫೈನಲ್ನಲ್ಲಿ ಡಾಲ್ಫೀನ್ಸ್ ಸ್ಪೋಟ್ರ್ಸ್ ಕ್ಲಬ್ ತಂಡ ಶುಂಠಿ ಭಜರಂಗದಳ ತಂಡದ ವಿರುದ್ಧ 1-0 ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿತು. ವಿದೇಶಿ ಮೂಲದ ಆಟಗಾರ ಫ್ರಾಂಕ್ 18 ನೇ ನಿಮಿಷದಲ್ಲಿ ಗೆಲುವಿನ ಗೋಲು ಗಳಿಸಿದರು.
ಬೆಸ್ಟ್ ಗೋಲ್ ಕೀಪರ್ ಪ್ರಶಸ್ತಿಯನ್ನು ಡಾಲ್ಫಿನ್ಸ್ನ ದೀಪಕ್ ಪಡೆದರು. ಬೆಸ್ಟ್ ಫಾರ್ವಡ್ ಆಗಿ ಗೌಡಳ್ಳಿ ಫ್ರೆಂಡ್ಸ್ನ ಶಿವಕುಮಾರ್, ಬೆಸ್ಟ್ ಫುಲ್ ಬ್ಯಾಕ್ ಪ್ರಶಸ್ತಿ ಡಾಲ್ಫಿನ್ಸ್ನ ರವೀಂದ್ರ, ಬೆಸ್ಟ್ ಎಂಟರ್ ಟ್ರೈನರ್ ಪ್ರಶಸ್ತಿ ಡಾಲ್ಫಿನ್ಸ್ನ ಪ್ರಾಂಕ್ ಪಡೆದರು. ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಿ ಮಾತನಾಡಿದ ಶಾಸಕ ಅಪ್ಪಚ್ಚು ರಂಜನ್, ಗ್ರಾಮೀಣ ಭಾಗದಲ್ಲಿ ನಡೆಯುವ ಕ್ರೀಡೆಗಳಿಂದ ಸಾಮರಸ್ಯ ವೃದ್ಧಿಸುತ್ತದೆ. ಕ್ರೀಡೆಯನ್ನು ಸ್ಪರ್ಧಾತ್ಮಕವಾಗಿ ಪರಿಗಣಿಸಬೇಕು ಎಂದರು.
ವೇದಿಕೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಬಿ.ಭಾರತೀಶ್, ಹಿಂದೂ ಗೆಳೆಯರ ಬಳಗದ ಅಧ್ಯಕ್ಷ ಎಸ್.ಎನ್. ಪೃಥ್ವಿ, ಜಿ.ಪಂ. ಸದಸ್ಯ ಬಿ.ಜೆ. ದೀಪಕ್, ಪ್ರಮುಖರಾದ ಎಸ್.ಎ.ಸುರೇಶ್, ಚಾಮೇರ ಪವನ್ ದೇವಯ್ಯ, ಹೆಗ್ಗಳ ಸೋಮಶೇಖರ್, ಬಿ.ಡಿ. ಮಂಜುನಾಥ್, ಗೌಡಳ್ಳಿ ಸುನಿಲ್ ಕುಮಾರ್, ಮುಖ್ಯ ಶಿಕ್ಷಕ ನಾಗೇಂದ್ರ, ಸುಧಾಕರ್, ಪ್ರಸನ್ನ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಇದೇ ಸಂದರ್ಭ ಅಂತರ್ರಾಷ್ಟ್ರೀಯ ಫುಟ್ಬಾಲ್ ಆಟಗಾರ ತಮಿಳುನಾಡಿನ ಕಾರ್ತಿಕ್ ಅವರನ್ನು ಸನ್ಮಾನಿಸಲಾಯಿತು.