ಸೋಮವಾರಪೇಟೆ, ಮಾ. 30: ಸಮೀಪದ ತೋಳೂರುಶೆಟ್ಟಳ್ಳಿ ಗ್ರಾ.ಪಂ. ವ್ಯಾಪ್ತಿಯ ಗ್ರಾಮಗಳಿಗೆ ಸಮರ್ಪಕ ರಸ್ತೆಗಳಿಲ್ಲ. ಈ ಬಗ್ಗೆ ಹಲವಾರು ಬಾರಿ ಸಂಬಂಧಿಸಿದವರ ಗಮನ ಸೆಳೆದರೂ ಸ್ಪಂದನವಿಲ್ಲ. ಈ ಹಿನ್ನೆಲೆ ಮುಂಬರುವ ವಿಧಾನಸಭಾ ಚುನಾವಣೆಯನ್ನು ಗ್ರಾಮಸ್ಥರು ಬಹಿಷ್ಕರಿಸುವದಾಗಿ ಗ್ರಾಮಾಭಿವೃದ್ಧಿ ಸಮಿತಿ ಎಚ್ಚರಿಕೆ ನೀಡಿದೆ. ಕಳೆದ 30 ವರ್ಷಗಳ ಹಿಂದೆ ನಿರ್ಮಾಣವಾದ ರಸ್ತೆಗಳ ಗುಂಡಿ ಯನ್ನೂ ಮುಚ್ಚಿಲ್ಲ. ಹತ್ತಾರು ಬಾರಿ ಜನಪ್ರತಿನಿಧಿಗಳು, ಅಧಿಕಾರಿಗಳನ್ನು ಸಂಪರ್ಕಿಸಿದರೂ ರಸ್ತೆಯ ಅವ್ಯವಸ್ಥೆ ಮಾತ್ರ ಬದಲಾಗಿಲ್ಲ. ಈ ಹಿನ್ನೆಲೆ ಜಿಲ್ಲಾ ಪಂಚಾಯಿತಿ ಇಂಜಿನಿಯರಿಂಗ್ ವಿಭಾಗದ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವದು. ಇದಕ್ಕೂ ಸ್ಪಂದಿಸದಿದ್ದಲ್ಲಿ ಮುಂದಿನ ವಿಧಾನಸಭಾ ಚುನಾವಣೆಯನ್ನು ಬಹಿಷ್ಕರಿಸಲಾಗುವದು ಎಂದು ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ರಾಜ್‍ಗೋಪಾಲ್ ಹೇಳಿದರು.

ಪತ್ರಿಕಾಭವನದಲ್ಲಿ ಆಯೋಜಿಸ ಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತೋಳೂರು-ಶೆಟ್ಟಳ್ಳಿಯಿಂದ ಚಿಕ್ಕತೋಳೂರು, ದೊಡ್ಡಮನೆಕೊಪ್ಪ ಮತ್ತು ಸುಗ್ಗಿ ದೇವಸ್ಥಾನಕ್ಕೆ ಹೋಗುವ ರಸ್ತೆ ತುಂಬಾ ಹದಗೆಟ್ಟಿದ್ದು, ವಾಹನಗಳು ತೆರಳಲು ಸಾಧ್ಯವಿಲ್ಲ. ಶಾಲಾ ಮಕ್ಕಳು ಸುಮಾರು 4 ಕಿಲೋ ಮೀಟರ್ ನಡೆದುಕೊಂಡು ಹೋಗಬೇಕಾದಂತಹ ಪರಿಸ್ಥಿತಿ ಇದೆ. ಶಾಲಾ ವಾಹನಗಳು ಮತ್ತು ಬಾಡಿಗೆ ವಾಹನಗಳು ಇಲ್ಲಿಗೆ ಬರುತ್ತಿಲ್ಲ ಎಂದು ಅಳಲು ತೋಡಿಕೊಂಡರು.

ಈ ರಸ್ತೆಗೆ ಹೊಂದಿಕೊಂಡಂತೆ ಅಂಬೇಡ್ಕರ್ ಕಾಲೋನಿ ಇದ್ದು, ಸುಮಾರು 80 ಕುಟುಂಬಗಳು ವಾಸ ಮಾಡುತ್ತಿವೆ. ಅವರಿಗೂ ಮೂಲಭೂತ ಅವಶ್ಯಕತೆಗಳನ್ನು ನೀಡದೆ ಸರಕಾರ ಮತ್ತು ಜಿಲ್ಲಾಡಳಿತ ಅನ್ಯಾಯ ವೆಸಗುತ್ತಿವೆ ಎಂದು ಆರೋಪಿಸಿದರು.

ಗೋಷ್ಠಿಯಲ್ಲಿ ಗ್ರಾಮಾಭಿವೃದ್ಧಿ ಸಮಿತಿಯ ಕಾರ್ಯದರ್ಶಿ ಡಿ.ಎಲ್. ಜಗದೀಶ್, ಪದಾಧಿಕಾರಿಗಳಾದ ಎಸ್.ಬಿ. ರಾಜ್‍ಕುಮಾರ್, ಬಿ.ಜಿ. ನಾಗರಾಜ್, ಡಿ.ಎಂ. ದಿಲೀಪ್ ಉಪಸ್ಥಿತರಿದ್ದರು.