ಶನಿವಾರಸಂತೆ, ಮಾ. 30: ಭಾರತೀಯ ರಾಷ್ಟ್ರೀಯ ಮಜ್ದೂರ್ ಕಾಂಗ್ರೆಸ್ (IಓಖಿUಅ) ವತಿಯಿಂದ ಶನಿವಾರಸಂತೆಯ ಕಮಲ ಕಾಂಪ್ಲೆಕ್ಸ್‍ನಲ್ಲಿ ಕಾರ್ಮಿಕರಿಗೆ ಮಾಹಿತಿ ಕಾರ್ಯಾಗಾರ ಹಮ್ಮಿಕೊಳ್ಳಲಾಯಿತು. ಕೊಡಗು ಜಿಲ್ಲಾ ಭಾರತೀಯ ರಾಷ್ಟ್ರೀಯ ಮಜ್ದೂರ್ ಕಾಂಗ್ರೆಸ್ ಅಧ್ಯಕ್ಷ ಟಿ.ಪಿ. ಹಮೀದ್ ಅಧ್ಯಕ್ಷತೆ ವಹಿಸಿದ್ದರು.

ಬಳಿಕ ಮಾತನಾಡಿದ ಅವರು, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ವತಿಯಿಂದ ಸುಮಾರು 30 ಕ್ಕೂ ಹೆಚ್ಚು ಸ್ವಸಹಾಯ ಸಂಸ್ಥೆಗಳಿಗೆ ಬ್ಯಾಂಕ್ ಮುಖೇನ ಸಾಲ ವಿತರಿಸಲು ವ್ಯವಸ್ಥೆ ಮಾಡಲಾಗಿದೆ. ಇದರ ಪ್ರಯೋಜನ ಪಡೆದು ಸ್ವಸಹಾಯ ಸಂಘದ ಮಹಿಳಾ ಕಾರ್ಮಿಕರು ಆರ್ಥಿಕ ಶಕ್ತಿ ಹೊಂದಬೇಕು ಎಂದರು.

ತಾಲೂಕು ಪಂಚಾಯಿತಿ ಸದಸ್ಯ ಬಿ.ಎಸ್. ಅನಂತ ಕುಮಾರ್ ಮಾತನಾಡಿ, ಮಹಿಳೆಯರು ಸಂಘಟಿತರಾಗಿ ಬ್ಯಾಂಕಿನಲ್ಲಿ ವ್ಯವಹರಿಸಿ ಉದ್ದಿಮೆ ಆರಂಭಿಸಲು ಮನಸ್ಸು ಮಾಡಿರುವದು ಉತ್ತಮ ಕಾರ್ಯ ಎಂದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ಗೋವಿಂದರಾಜ್ ದಾಸ್ ಕಾರ್ಯಕರ್ತರಾದ ದಯಾಕರ, ಪಾರ್ವತಿ, ಸುಷ್ಮಾ, ಕಾವೇರಿ, ರಮ್ಯ ಹಾಗೂ 30ಕ್ಕೂ ಅಧಿಕ ಸ್ವಸಹಾಯ ಸಂಘದ ಪ್ರತಿನಿಧಿಗಳು ಉಪಸ್ಥಿತರಿದ್ದರು.