ಮಡಿಕೇರಿ, ಮಾ. 30: ಮಡಿಕೇರಿ ನಗರದಲ್ಲಿ ಒಳಚರಂಡಿ ಕಾಮಗಾರಿ ಮುಂದುವರಿದಿದ್ದು, ಇದು ಅಭಿವೃದ್ಧಿಯ ಹೆಸರಿನ ಕಾಮಗಾರಿಯಾದರೂ ಜನತೆಗೆ ನಿತ್ಯ ಕಿರಿಕಿರಿಯಾಗುತ್ತಿರುವದು ದಿಟ. ಯಾವದಿನ, ಯಾವ ರಸ್ತೆಯಲ್ಲಿ ಚರಂಡಿ ನಿರ್ಮಾಣದ ಕೆಲಸ ನಡೆಯುತ್ತದೆ ಎಂಬ ಮಾಹಿತಿಯ ಕೊರತೆಯಿಂದಾಗಿ ಜನರು ಪರದಾಡುವಂತಾಗಿದೆ. ದಿಢೀರನೆ ಕಾಮಗಾರಿ ಕೈಗೆತ್ತಿಕೊಳ್ಳುವದರಿಂದ ಮನೆಯಿಂದ ವಾಹನಗಳನ್ನು ತೆಗೆಯಲು ಸಮಸ್ಯೆ ಅನುಭವಿಸಿದ ಮಂದಿ ಈ ಬಗ್ಗೆ ಮೌನ ಆಕ್ರೋಶ ವ್ಯಕ್ತಪಡಿಸುತ್ತಾರೆ. ಕಾವೇರಿ ಬಡಾವಣೆಯಲ್ಲಿನ ರಸ್ತೆಗಳನ್ನು ಕಾಂಕ್ರೀಟ್ ರಸ್ತೆಯನ್ನಾಗಿ ಪರಿವರ್ತಿಸಲಾಗಿದ್ದು, ಇತರ ಬಡಾವಣೆಗಳಿಗಿಂತ ಒಂದು ರೀತಿಯಲ್ಲಿ ವ್ಯವಸ್ಥಿತವಾಗಿತ್ತು. ಇದೀಗ ಈ ಕಾಂಕ್ರೀಟ್ ರಸ್ತೆಯ ನಡುಭಾಗದಲ್ಲಿ ಗುಂಡಿ ತೆಗೆದಿರುವದರಿಂದ ರಸ್ತೆಯ ಸ್ಥಿತಿ ಗಮನಿಸಿ ಜನರು ಚೇ.. ಇದೇನು ಅನ್ಯಾಯ ಒಟ್ಟಿಗೆ ಕೆಲಸ ಮುಗಿಸಬಹುದಿತ್ತಲ್ಲವೇ... ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಮೊನ್ನೆಯಷ್ಟೆ ಇಲ್ಲಿ ಕಾಮಗಾರಿ ನಡೆಸಲಾಗಿದ್ದು, ರಸ್ತೆ ಸಂಚಾರಕ್ಕೆ ಅಡಚಣೆಯಾಗಿತ್ತು. ಈ ನಡುವೆ ಇಂದು ಬೆಳಿಗ್ಗೆ ಮತ್ತೆ ಗುಂಡಿತೆಗೆಯಲಾಗಿದೆ. ಇದರ ಅರಿವಿಲ್ಲದೆ ಮನೆಯಿಂದ ಕೆಲಸ ಕಾರ್ಯಗಳಿಗೆ ಹೊರಟವರು ವಾಹನ ತೆರಳಲಾಗದೆ ಅತ್ತ ಕಾಲ್ನಡಿಗೆಯಲ್ಲಿ ಹೊಂಡ ದಾಟಲು ಪರಿತಪಿಸುವಂತಾಗಿತ್ತು.