ಮಡಿಕೇರಿ, ಮಾ. 30: ಕಾಂಗ್ರೆಸ್ ಪಕ್ಷದಲ್ಲೀಗ ಪದಾಧಿಕಾರಿಗಳ ಅಮಾನತು, ಉಚ್ಚಾಟನೆಯೊಂದಿಗೆ ರಾಜೀನಾಮೆ ಪರ್ವ ಆರಂಭವಾಗಿದೆ. ರಾಜ್ಯದ ಹಿರಿಯ ನಾಯಕ ಎಸ್.ಎಂ. ಕೃಷ್ಣರಿಂದ ಹಿಡಿದು ಹಲವರು ರಾಜೀನಾಮೆ ನೀಡಿ ಪಕ್ಷದಿಂದ ಹೊರಬಂದಿದ್ದರೆ ಇತ್ತ ಕೊಡಗು ಜಿಲ್ಲೆಯಲ್ಲೂ ಜಿಲ್ಲಾ ವಕ್ತಾರರಾಗಿದ್ದ ಮಂಜುನಾಥ್ ಕುಮಾರ್ ರಾಜೀನಾಮೆ ನೀಡಿದ್ದರೆ, ಸೋಮವಾರಪೇಟೆ ಬ್ಲಾಕ್ ಅಧ್ಯಕ್ಷರಾಗಿದ್ದ ಕೆ.ಎಂ. ಲೋಕೇಶ್ ಅವರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿದೆ. ಇತ್ತ ಮಡಿಕೇರಿ ನಗರಸಭೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ಆರೋಪದಡಿ ಶ್ರೀಮತಿ ಬಂಗೇರ ಹಾಗೂ ವೀಣಾಕ್ಷಿ ಎಂಬ ಮಹಿಳಾ ಸದಸ್ಯರನ್ನು ಪಕ್ಷದಿಂದ ಉಚ್ಚಾಟಿಸಿದ್ದಲ್ಲದೆ, ಅವರ ಮೇಲೆ ಪಕ್ಷ ವಿರೋಧಿ ಆರೋಪದಡಿ ಮೊಕದ್ದಮೆ ದಾಖಲಿಸಿ ನಗರಸಭಾ ಸದಸ್ಯತ್ವ ಸ್ಥಾನದಿಂದಲೇ ವಜಾಗೊಳಿಸಲಾಗಿದೆ.

ಈ ನಡುವೆ ಮೂಡಾ ಅಧ್ಯಕ್ಷ ಸ್ಥಾನ ಸಿಗಲಿಲ್ಲ ಎಂಬ ಕಾರಣಕ್ಕೆ ಅಸಮಾಧಾನಗೊಂಡಿದ್ದ, ಹಲವು ವರ್ಷಗಳಿಂದ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿರುವ ವಿ.ಪಿ. ಸುರೇಶ್ ಅವರು ಕೂಡ ರಾಜೀನಾಮೆ ನೀಡಲು ಮುಂದಾಗಿದ್ದರು. ಇನ್ನು ಪಕ್ಷದ ಹಲವು ನಾಯಕರುಗಳು ಅಸಮಾಧಾನ ವ್ಯಕ್ತಪಡಿಸುತ್ತಿರುವದು ಸರ್ವೇ ಸಾಮಾನ್ಯವಾಗಿದೆ.

ಇದೀಗ ಮಡಿಕೇರಿ ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾಗಿರುವ, ನಗರಸಭೆ ಸದಸ್ಯರೂ ಆಗಿರುವ ಲೀಲಾ ಶೇಷಮ್ಮ ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪಕ್ಷದ ಸಕ್ರಿಯರಾಗಿ, ನಗರಸಭಾ ಸದಸ್ಯೆಯಾಗಿ ಚಟುವಟಿಕೆಯಿಂದ ಕಾರ್ಯನಿರ್ವಹಿಸುತ್ತಿರುವ ಲೀಲಾ ಶೇಷಮ್ಮ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ರಾಜೀನಾಮೆ ಪ್ರತಿಯನ್ನು ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಪುಷ್ಪಲತಾ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷೆ ಟಿ.ಪಿ. ರಮೇಶ್ ಅವರಿಗೆ ಸಲ್ಲಿಸಿದ್ದಾರೆ.

ಕಾರಣಾಂತರಗಳಿಂದ ರಾಜೀನಾಮೆ ನೀಡಿದ್ದು, ಪಕ್ಷದ ಕಾರ್ಯಕರ್ತೆಯಾಗಿ ಸಕ್ರಿಯರಾಗಿ ರುವದಾಗಿ ಲೀಲಾ ಶೇಷಮ್ಮ ‘ಶಕ್ತಿ'ಯೊಂದಿಗೆ ಹೇಳಿಕೊಂಡಿದ್ದಾರೆ.

ನಾಪೋಕ್ಲು

ಕಕ್ಕಬೆ ವಲಯ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಡಕಡ ಸುರೇಶ್ ಬೆಳ್ಯಪ್ಪ ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸ್ವ ಇಚ್ಚೆಯಿಂದ ರಾಜೀನಾಮೆ ನೀಡಿರುವದಾಗಿ ಅವರು ‘ಶಕ್ತಿ'ಗೆ ತಿಳಿಸಿದ್ದಾರೆ.