ವೀರಾಜಪೇಟೆ, ಮಾ. 30: ಕೊಡಗು ದಂತ ಮಹಾ ವಿದ್ಯಾಲಯದಲ್ಲಿ ವಕ್ರ ದಂತ ಚಿಕಿತ್ಸೆಗೆ ಸಂಬಂಧಪಟ್ಟಂತೆ ಎರಡು ದಿನಗಳ ರಾಷ್ಟ್ರ ಮಟ್ಟದ ಕಾರ್ಯಾಗಾರಕ್ಕೆ ಚಾಲನೆ ನೀಡಲಾಯಿತು. ಡಾ. ಅನ್ಮೋಲ್ ಕಲ್ಹಾ ಅವರು ಕಾರ್ಯಾಗಾರವನ್ನು ಉದ್ಘಾಟಿಸಿದರು.

ಸಿ.ಐ.ಡಿ.ಎಸ್. ಮುಖ್ಯಸ್ಥ ಡಾ. ಸುನಿಲ್ ಮುದ್ದಯ್ಯ ಪ್ರಾಸ್ತಾವಿಕವಾಗಿ ಸ್ವಾಗತಿಸಿ ಮಾತನಾಡಿ, ವಕ್ರ ದಂತ ಚಿಕಿತ್ಸೆಗೆ ಸಂಬಂಧಪಟ್ಟಂತೆ ನೂತನ ಸಂಶೋಧನೆ ಮತ್ತು ನವೀನ ಆವಿಷ್ಕಾರಗಳಿಗೆ ಕಾರ್ಯಾಗಾರ ನೆರವಾಗಲಿವೆ. ದಂತ ವೈದ್ಯಕೀಯದಲ್ಲಿ ಪದವಿ ಪಡೆದವರು ಮುಂದೆ ವೈದ್ಯಕೀಯ ಕ್ಷೇತ್ರದಲ್ಲಿ ಸಂಶೋಧನೆಗಳಿಗೆ ಆದ್ಯತೆ ನೀಡಿ ಆರಿಸಿಕೊಳ್ಳಬೇಕು ಎಂದರು. ರಾಷ್ಟ್ರಮಟ್ಟದ ಈ ಕಾರ್ಯಾಗಾರದಲ್ಲಿ ರಾಜ್ಯದಿಂದ ಅಲ್ಲದೆ ಹೊರ ರಾಜ್ಯಗಳಾದ ಕೇರಳ, ತಮಿಳುನಾಡು ಮತ್ತು ಆಂಧ್ರ ರಾಜ್ಯಗಳಿಂದ 300ಕ್ಕೂ ಹೆಚ್ಚು ದಂತ ವೈದ್ಯಕೀಯ ಸ್ನಾತಕೋತರ ಪದವೀದರ ವೈದ್ಯರು ಪಾಲ್ಗೊಂಡಿದ್ದಾರೆ. ಉತ್ತರ ಭಾರತದ ನುರಿತ ಸಂಪನ್ಮೂಲ ವ್ಯಕ್ತಿಗಳಾದ ಡಾ. ಎನ್.ಆರ್. ಕೃಷ್ಣಸ್ವಾಮಿ, ಡಾ. ರಾಮಚಂದ್ರ, ಡಾ. ಅಶ್ವಿನ್ ಜಾರ್ಜ್, ಡಾ. ಅಕ್ಷಯ್ ಶೆಟ್ಟಿ ಮತ್ತು ಡಾ. ಅರವಿಂದ್ ಎರಡು ದಿನಗಳ ಅವಧಿಯಲ್ಲಿ ವಿವಿಧ ವಿಷಯಗಳ ಬಗ್ಗೆ ಉಪನ್ಯಾಸ ನೀಡಲಿದ್ದಾರೆ. ಪ್ರಾಂಶುಪಾಲ ಕೆ.ಸಿ. ಪೊನ್ನಪ್ಪ ಹಾಗೂ ಸಂಜಯ್ ಸೋಮಯ್ಯ ವೇದಿಕೆಯಲ್ಲಿದ್ದರು.