ಮಡಿಕೇರಿ, ಮಾ. 30: ಅಂಗನವಾಡಿ ನೌಕರರ ಹೋರಾಟಕ್ಕೆ ಸ್ಪಂದಿಸಿರುವ ರಾಜ್ಯ ಸರಕಾರ ಏ. 10 ರಂದು ವಿಶೇಷ ಸಭೆ ಕರೆದು ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿದೆ. ಆದರೆ ಭರವಸೆಯಂತೆ ಸರಕಾರ ನಡೆದುಕೊಳ್ಳದಿದ್ದಲ್ಲಿ ಮುಖ್ಯಮಂತ್ರಿಗಳ ನಿವಾಸದೆದುರು ಪ್ರತಿಭಟನೆ ನಡೆಸುವದಾಗಿ ಸಿಐಟಿಯು ಅಂಗನವಾಡಿ ನೌಕರರ ಸಂಘ ಎಚ್ಚರಿಕೆ ನೀಡಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷೆ ಚೇಂದಿರ ಕಾವೇರಮ್ಮ, ಕಳೆದ 42 ವರ್ಷಗಳಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಅಂಗನವಾಡಿ ನೌಕರರು ಸೇವೆ ಸಲ್ಲಿಸುತ್ತಿದ್ದು, ಇದರಿಂದ ಇಲಾಖೆ ಅಭಿವೃದ್ಧಿ ಹೊಂದಿದೆಯೇ ಹೊರತು ನೌಕರರು ಅಭಿವೃದ್ಧಿ ಹೊಂದಲು ಸಾಧ್ಯವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸಿಐಟಿಯು ನೇತೃತ್ವದಲ್ಲಿ ಜ. 30 ರಿಂದ ಮೂರು ದಿನದ ಹೋರಾಟ ನಡೆಸಿದ ಸಂದರ್ಭ, ಸರಕಾರ ಮಾರ್ಚ್ ತಿಂಗಳ ಬಜೆಟ್‍ನಲ್ಲಿ ಕಾರ್ಯಕರ್ತೆಯರಿಗೆ ರೂ. 1000 ಹಾಗೂ ಸಹಾಯಕಿಯರಿಗೆ ರೂ. 500 ಹೆಚ್ಚಿಸುವ ಮೂಲಕ ಹೋರಾಟಗಾರರ ನಿರೀಕ್ಷೆಯನ್ನು ಹುಸಿಗೊಳಿಸಿದೆ ಎಂದು ಕಾವೇರಮ್ಮ ಟೀಕಿಸಿದರು.
ಮಾ. 20 ರಿಂದ ನಡೆದ ಅಂಗನವಾಡಿ ನೌಕರರ ಪ್ರತಿಭಟನೆಗೆ ಬೆಂಬಲ ನೀಡುವ ಬದಲು ಕೆಲವು ಸಂಘಟನೆಗಳು ಹಾದಿ ತಪ್ಪಿಸುವ ಹೇಳಿಕೆಗಳನ್ನು ನೀಡಿ ಗೊಂದಲ ಮೂಡಿಸಿವೆ ಎಂದು ಆರೋಪಿಸಿದರು.
ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೆಚ್.ಬಿ. ರಮೇಶ್ ಮಾತನಾಡಿ, ಏ. 10 ರಂದು ಬೇಡಿಕೆ ಈಡೇರದಿದ್ದಲ್ಲಿ ಹೋರಾಟವನ್ನು ಮತ್ತೆ ತೀವ್ರಗೊಳಿಸುವದಾಗಿ ಎಚ್ಚರಿಕೆ ನೀಡಿದರು.
ಗೋಷ್ಠಿಯಲ್ಲಿ ಸಂಘಟನೆಯ ಪ್ರಧಾನ ಕಾರ್ಯದರ್ಶಿ ವಿ.ಎಸ್. ಸುಮಿತ್ರಾ, ಖಜಾಂಚಿ ಎಂ.ವಿ. ಭಾಗೀರಥಿ, ಉಪಾಧ್ಯಕ್ಷೆ ಎಂ.ಬಿ. ಜಮುನಾ, ಹಾಗೂ ವೀರಾಜಪೇಟೆ ತಾಲೂಕು ಕ್ಷೇಮ ನಿಧಿ ಅಧ್ಯಕ್ಷೆ ಬಿ.ಕೆ. ಸರೋಜಾ, ಉಪಸ್ಥಿತರಿದ್ದರು.