ಕುಶಾಲನಗರ, ಮಾ. 30: ವಿದ್ಯಾರ್ಥಿಗಳು ತಮ್ಮ ಜೀವನವನ್ನು ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡು ಬದುಕನ್ನು ಸಾಕಾರಗೊಳಿಸಿಕೊಳ್ಳುವಂತಾಗಬೇಕು ಎಂದು ಮಂಗಳೂರು ವಿಶ್ವ ವಿದ್ಯಾನಿಲಯದ ಕುಲಪತಿ ಪ್ರೊ. ಕೆ. ಭೈರಪ್ಪ ಕರೆ ನೀಡಿದರು.

ಚಿಕ್ಕಅಳುವಾರದ ಮಂಗಳೂರು ವಿಶ್ವವಿದ್ಯಾನಿಲಯ ಸ್ನಾತಕೋತರ ಕೇಂದ್ರದಲ್ಲಿ ಮಂಗಳ ಗಂಗೋತ್ರಿಯ ರಾಷ್ಟ್ರೀಯ ಸೇವಾ ಯೋಜನಾ ಘಟಕ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಸಮಾರೋಪ ಕಾರ್ಯಕ್ರಮದಲ್ಲಿ ಸ್ನಾತಕೋತರ ಕೇಂದ್ರದ ನಿರ್ದೇಶಕ ಪ್ರೊ. ವಿ. ರವೀಂದ್ರಾಚಾರಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇದೇ ಸಂದರ್ಭ ಶಿಬಿರಾರ್ಥಿಗಳಾದ ಜಯಲತಾ ಮತ್ತು ಮುತ್ತುರಾಜ್ ಶಿಬಿರದ ಅನುಭವಗಳನ್ನು ಹಂಚಿಕೊಂಡರು.

ಕಾರ್ಯಕ್ರಮದ ನಿರೂಪಣೆಯನ್ನು ಶಿಬಿರಾರ್ಥಿ ಶ್ರೀನಿವಾಸ್, ಸ್ವಾಗತವನ್ನು ಸಿದ್ಧರಾಜು ಹಾಗೂ ವಂದನೆಯನ್ನು ಶಿಬಿರಾಧಿಕಾರಿ ಡಾ. ತ್ರಿವೇಣಿ ನೆರವೇರಿಸಿದರು.