ಮಡಿಕೇರಿ, ಮಾ. 31: ಸೂಕ್ಷ್ಮ ಪರಿಸರ ವಲಯ ಘೋಷಣೆÉಯಿಂದ ಗ್ರಾಮೀಣ ಅಭಿವೃದ್ಧಿ ಕಾರ್ಯಗಳಿಗೆ ಯಾವದೇ ಅಡ್ಡಿ ಇಲ್ಲವೆಂದು ಡಾ. ಕಸ್ತೂರಿ ರಂಗನ್ ವರದಿಯಲ್ಲಿ ಉಲ್ಲೇಖಿಸಲಾಗಿದ್ದರೂ ಕೆಲವರು ಉದ್ದೇಶಪೂರ್ವಕವಾಗಿ ಜನರಲ್ಲಿ ಆತಂಕವನ್ನು ಸೃಷ್ಟಿಸುತ್ತಿದ್ದಾರೆ ಎಂದು ಸತ್ಯಾನ್ವೇಷಣಾ ಸಮಿತಿ ಆರೋಪಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಪ್ರಮುಖ ಕೇಟೋಳಿರ ಸನ್ನಿ ಸೋಮಣ್ಣ, ಸೂಕ್ಷ್ಮ ಪರಿಸರ ವಲಯ ವ್ಯಾಪ್ತಿಯ ಗ್ರಾಮದ ಜನರಿಗೆ ಡಾ. ಕಸ್ತೂರಿ ರಂಗನ್ ವರದಿಯ ಸಂಪೂರ್ಣ ಮಾಹಿತಿ ಯನ್ನು ಕನ್ನಡದಲ್ಲಿ ನೀಡದಿರುವದೆ ಗೊಂದಲಗಳಿಗೆ ಕಾರಣವೆಂದು ಅಭಿಪ್ರಾಯಪಟ್ಟರು. ಡಾ. ಕಸ್ತೂರಿ ರಂಗನ್ ವರದಿ ಜಾರಿಯಿಂದ ಮರಳು, ಟಿಂಬರ್, ರೆಸಾರ್ಟ್ ಹಾಗೂ ಭೂ ಮಾಫಿಯಾಗಳಿಗೆ ಕಡಿವಾಣ ಬೀಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರÀು.

ವರದಿಯಲ್ಲಿ ಗ್ರಾಮದ ಅಭಿವೃದ್ಧಿಗೆ ಅನುದಾನವನ್ನು ನೀಡಬೇಕು ಮತ್ತು ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ಉಲ್ಲೇಖಿಸಲಾಗಿದೆ. ಈ ಭಾಗದಲ್ಲಿ ವನ್ಯಜೀವಿಗಳಿಂದ ಹಾನಿಯಾದರೆ ತಕ್ಷಣ ಪರಿಹಾರ ಒದಗಿಸುವದಕ್ಕೆ ಅವಕಾಶವಿದೆ. 1986ರ ಪರಿಸರ ಕಾಯ್ದೆಯನ್ವಯ ವರದಿ ತಯಾರಾಗಿದ್ದು, ಇದು ಜಾರಿಯಾಗುವದರಿಂದ ಯಾರಿಗೂ, ಯಾವದೇ ರೀತಿಯಲ್ಲಿ ತೊಂದರೆ ಇಲ್ಲವೆಂದು ಸನ್ನಿ ಸೋಮಣ್ಣ ಅಭಿಪ್ರಾಯಪಟ್ಟರು. ಡಾ. ಕಸ್ತೂರಿ ರಂಗನ್ ವರದಿ ಕೊಡಗಿಗೆ ವರದಾನ ವಾಗಿದ್ದು, ಇದು ಜಾರಿಯಾದರೆ, ಪರಿಸರವನ್ನು ನಾಶ ಮಾಡುವ ಮಾಫಿಯಾಗಳಿಗೆ ಕಡಿವಾಣ ಬೀಳಲಿದೆ ಎಂದರು. ಕೊಡಗಿನ ಜಲಮೂಲ ಮತ್ತು ಪರಿಸರದ ಸಂರಕ್ಷಣೆಗಾಗಿ ಕಸ್ತೂರಿ ರಂಗನ್ ವರದಿ ಜಾರಿಯಾಗುವ ಅಗತ್ಯವಿದೆಯೆಂದು ಅವರು ತಿಳಿಸಿದರು.

ಗೋಷ್ಠಿಯಲ್ಲಿ ಪಾಂಡಂಡ ನರೇಶ್ ಹಾಗೂ ಹ್ಯಾರೀಸ್ ಉಪಸ್ಥಿತರಿದ್ದರು.