ಕುಶಾಲನಗರ, ಮಾ. 31: ಕುಶಾಲನಗರ ಪಟ್ಟಣ ಪಂಚಾಯಿತಿಯ 9ನೇ ವಾರ್ಡ್ ಶೈಲಜಾ ಬಡಾವಣೆ ನಿವಾಸಿಗಳು ತಮ್ಮ ಬಡಾವಣೆಯಲ್ಲಿ ತಕ್ಷಣ ವಾರ್ಡ್‍ಸಭೆ ನಡೆಸಿ ಸಮಸ್ಯೆಗಳನ್ನು ಬಗೆಹರಿಸುವಂತೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ವಾರ್ಡ್ ಸದಸ್ಯೆ ಕವಿತಾ ಮಂಜು ಉಪಸ್ಥಿತಿಯಲ್ಲಿ ಬಡಾವಣೆಯ ನಿವಾಸಿಗಳು ಪಟ್ಟಣ ಪಂಚಾಯಿತಿ ಕಚೇರಿಗೆ ಆಗಮಿಸಿ ತಮ್ಮ ಸಮಸ್ಯೆಗಳ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಒದಗಿಸಿದರು. ಬಡಾವಣೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆಯೊಂದಿಗೆ ಹೆದ್ದಾರಿಯಿಂದ ಬಡಾವಣೆಗೆ ತೆರಳಲು ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಒಳಚರಂಡಿ ಕಾಮಗಾರಿಯಿಂದ ಬಡಾವಣೆಯ ಚರಂಡಿ ಸಂಪೂರ್ಣ ಕೆಟ್ಟು ನಿಂತಿದ್ದು ತಕ್ಷಣ ಸರಿಪಡಿಸಿಕೊಡುವಂತೆ ಆಗ್ರಹಿಸಿದ್ದಾರೆ. ಉದ್ಯಾನವನ ನಿರ್ಮಾಣ ಹಾಗೂ ರಸ್ತೆ ನಡುವೆ ವಿದ್ಯುತ್ ಕಂಬಗಳು ಅಳವಡಿಸಿರುವದರಿಂದ ತೊಂದರೆ ಉಂಟಾಗಿದೆ. ತಕ್ಷಣ ಸರಿಪಡಿಸಿಕೊಡುವಂತೆ ಆಗ್ರಹಿಸಿದರು.

ಈ ಸಂದರ್ಭ ಪ್ರತಿಕ್ರಿಯಿಸಿದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎ.ಎಂ. ಶ್ರೀಧರ್, ಸಧ್ಯದಲ್ಲಿಯೇ ವಾರ್ಡ್‍ಸಭೆ ಕರೆದು ಸಮಸ್ಯೆ ಪರಿಹಾರಕ್ಕೆ ಆದ್ಯತೆ ನೀಡುವದಾಗಿ ಭರವಸೆ ನೀಡಿದ್ದಾರೆ.