ಸಿದ್ದಾಪುರ, ಮಾ. 31: ಕೆಲವು ಸಣ್ಣಪುಟ್ಟ ಗೊಂದಲಗಳ ನಡುವೆ ಸಿದ್ದಾಪುರ ಗ್ರಾಮ ಪಂಚಾಯಿತಿಯ 2017-18ನೇ ಸಾಲಿನ ಮಾಂಸ ಮಾರಾಟದ ಹಕ್ಕು ಸೇರಿದಂತೆ ಹರಾಜು ಪ್ರಕ್ರಿಯೆಗಳು ಯಶಸ್ವಿಯಾಗಿ ನಡೆದು ಪಂಚಾಯಿತಿಗೆ ಹೆಚ್ಚಿನ ಲಾಭ ಲಭಿಸಿದೆ. ಸಿದ್ದಾಪುರ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಎಂ.ಕೆ. ಮಣಿ ಅವರ ಅಧ್ಯಕ್ಷತೆಯಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೋಳಿ, ಕುರಿ ಮಾಂಸ ಹಾಗೂ ಹಸಿ ಮೀನು ಮಾರಾಟದ ಹರಾಜಿನಲ್ಲಿ ಹೆಚ್ಚಿನ ಪೈಪೋಟಿ ನಡೆಯಿತು. ಪಟ್ಟಣ ವ್ಯಾಪ್ತಿಯಲ್ಲಿ ಮಾಂಸಗಳನ್ನು ಮಾರಾಟ ಮಾಡದಂತೆ ಲೈಸನ್ಸ್ ನೀಡದಂತೆ ಸರ್ವಾನುಮತದಿಂದ ಆಡಳಿತ ಮಂಡಳಿಯು ನಿರ್ಣಯ ಕೈಗೊಂಡು ದಿಟ್ಟ ನಿಲುವು ತೆಗೆದುಕೊಂಡಿತ್ತು. ಇದನ್ನು ವಿರೋಧಿಸಿ ಪಟ್ಟಣದಲ್ಲಿ ಮಾಂಸ ವ್ಯಾಪಾರ ಮಾಡುತ್ತಿದ್ದ ಕೆಲವು ವ್ಯಾಪಾರಸ್ಥರು ತಾಲೂಕು ಕಾರ್ಯನಿರ್ವಾಹಣಾಧಿಕಾರಿ ಬಳಿ ತೆರಳಿ, ತಮಗೆ ಪಟ್ಟಣ ವ್ಯಾಪ್ತಿಯಲ್ಲಿ ಮಾಂಸ ಮಾರಾಟ ಮಾಡಲು ಲೈಸನ್ಸ್ ಮುಂದುವರಿಸುವಂತೆ ಒತ್ತಾಯಿಸಿದ್ದರು. ಅದಲ್ಲದೆ ನ್ಯಾಯಾಲಯದಲ್ಲಿ ದಾವೆಯನ್ನು ಹೂಡಿದ್ದರು. ಆದರೆ ಗ್ರಾಮ ಪಂಚಾಯಿತಿಯು ಶುಚಿತ್ವ ಕಾಪಾಡುವ ನಿಟ್ಟಿನಲ್ಲಿ ಸಿದ್ದಾಪುರದ ಮಾರುಕಟ್ಟೆಯ ಬಳಿ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಟ್ಟು ಹೈಟೆಕ್ ಮಾರುಕಟ್ಟೆ ಮಳಿಗೆಗಳನ್ನು ನಿರ್ಮಿಸಿ ಅಲ್ಲಿ ಮಾಂಸಗಳನ್ನು ಮಾರಾಟ ಮಾಡಲು ಹರಾಜು ಪ್ರಕ್ರಿಯೆಗಳಿಗೆ ಚಾಲನೆ ನೀಡಿದರು. ಮಾಂಸ, ಮೀನು ಮಾರುಕಟ್ಟೆ ಹರಾಜಿನ ಬಿಡ್ಡುದಾರರು ಪೈಪೋಟಿಯಲ್ಲಿ ಪಾಲ್ಗೊಂಡಿದ್ದರು. ಈ ಹಿಂದಿನ ಎಲ್ಲಾ ವರ್ಷಗಳಿಗಿಂತಲೂ ಈ ಬಾರಿ ಸಂತೆಮಾರುಕಟ್ಟೆ ಸುಂಕ ಎತ್ತುವಳಿ ರೂ. 5 ಲಕ್ಷಕ್ಕೂ ಹೆಚ್ಚಿನ ದರಕ್ಕೆ ಹರಾಜು ಗೊಂಡಿತ್ತು.

ಹರಾಜಿನ ಪ್ರಕ್ರಿಯೆಯನ್ನು ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ವಿಶ್ವನಾಥ್ ನಿರ್ವಹಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷೆ ರಾಜೇಶ್ವರಿ ಹಾಗೂ ಸದಸ್ಯರುಗಳು ಹಾಜರಿದ್ದರು.