ಮಡಿಕೇರಿ, ಮಾ. 31: ಗೌಡ ಫುಟ್ಬಾಲ್ ಅಕಾಡೆಮಿ ವತಿಯಿಂದ ಗೌಡ ಕುಟುಂಬಗಳ ನಡುವಿನ ದ್ವಿತೀಯ ವರ್ಷದ ‘ಗೌಡ ಫುಟ್ಬಾಲ್ ಟ್ರೋಫಿ-2017’ ಪಂದ್ಯಾವಳಿಗೆ ಮೇ 12 ರಂದು ಮರಗೋಡು ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಚಾಲನೆ ದೊರೆಯಲಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಕಾಡೆಮಿಯ ಪದಾಧಿಕಾರಿಗಳು, ಕಳೆದ ಸಾಲಿನಲ್ಲಿ ನಡೆಸಲಾದ ಪಂದ್ಯಾವಳಿಗೆ ನಿರೀಕ್ಷೆಗೂ ಮೀರಿದ ಸ್ಪಂದನ ದೊರಕಿದ ಹಿನ್ನೆಲೆ ಅಕಾಡೆಮಿ ವತಿಯಿಂದ ಎರಡನೇ ವರ್ಷದ ಪಂದ್ಯಾವಳಿಯನ್ನು ಆಯೋಜಿಸಲಾಗುತ್ತಿದೆ. ಆಸಕ್ತ ಕುಟುಂಬ ತಂಡಗಳು ಮೇ 5 ರೊಳಗೆ ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ಹೇಳಿದರು.

ಕಳೆದ ಬಾರಿ ಅಲ್ಪ ಅವಧಿಯಲ್ಲಿ ಆಯೋಜಿಸಿದ್ದ ಪಂದ್ಯಾವಳಿಯಲ್ಲಿ 80 ತಂಡಗಳು ಭಾಗವಹಿಸಿದ್ದು, ಈ ಬಾರಿ 100-120 ತಂಡಗಳು ಭಾಗವಹಿಸುವ ನಿರೀಕ್ಷೆ ಇದೆ. ಈ ಬಾರಿಯೂ ವಿಜೇತ ತಂಡಗಳಿಗೆ ಕ್ರಮವಾಗಿ 30 ಸಾವಿರ (ಪ್ರಥಮ) 20 ಸಾವಿರ (ದ್ವಿತೀಯ) ಹಾಗೂ ಸೆಮಿಫೈನಲ್ ಪ್ರವೇಶಿಸಿದ ಎರಡು ತಂಡಗಳಿಗೆ ತಲಾ 10 ಸಾವಿರ ನಗದು ಬಹುಮಾನದ ಜೊತೆಗೆ ಉತ್ತಮ ಆಟಗಾರರಿಗೆ ವೈಯಕ್ತಿಕ ಪ್ರಶಸ್ತಿಗಳನ್ನೂ ನೀಡಲಾಗುತ್ತದೆ ಎಂದು ತಿಳಿಸಿದರು. ಪಂದ್ಯಾವಳಿಯು 7+2 ಆಟಗಾರರ ಪಂದ್ಯವಾಗಿದ್ದು, ಆಟಗಾರರು ಸಮವಸ್ತ್ರ ಧರಿಸುವದು ಹಾಗೂ ಗುರುತಿನ ಚೀಟಿ ತರುವದನ್ನು ಕಡ್ಡಾಯಗೊಳಿಸಲಾಗಿದೆ. ಗೌಡ ಜನಾಂಗದಲ್ಲಿ ಪ್ರತಿಭೆಗಳಿದ್ದರೂ, ಅವರಿಗೆ ಸೂಕ್ತ ವೇದಿಕೆ ದೊರಕದೆ ಎಲೆಮರೆಯ ಕಾಯಿಗಳಂತಾಗಿದ್ದಾರೆ. ಇಂತಹ ಪ್ರತಿಭೆಗಳನ್ನು ಬೆಳಕಿಗೆ ತರುವದರೊಂದಿಗೆ ಅವರಿಗೆ ಪ್ರೋತ್ಸಾಹ ನೀಡುವದು ಅಕಾಡೆಮಿಯ ಉದ್ದೇಶವಾಗಿದೆ ಎಂದು ಅವರುಗಳು ಹೇಳಿದರು. ಈ ಬಾರಿಯ ಪಂದ್ಯಾವಳಿಗೆ ಸುಮಾರು ರೂ. 7-8 ಲಕ್ಷ ವೆಚ್ಚವಾಗುವ ನಿರೀಕ್ಷೆಯಿದ್ದು, ದಾನಿಗಳ ಸಹಕಾರದಿಂದ ಪಂದ್ಯಾವಳಿ ಯನ್ನು ಆಯೋಜಿಸಲಾಗುತ್ತಿದೆ. ಇದರೊಂದಿಗೆ ಅಕಾಡೆಮಿಗೆ ಸದಸ್ಯರನ್ನು ನೋಂದಾಯಿಸುವ ಅಭಿಯಾನವನ್ನು ನಡೆಸಲಾಗುತ್ತಿದ್ದು, ಮೊದಲು ಬಂದ 100 ಮಂದಿಗೆ ಆದ್ಯತೆ ನೀಡಲಾಗುವದು ಎಂದರು.

ಪಂದ್ಯಾವಳಿಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗೆ ಅಕಾಡೆಮಿ ಅಧ್ಯಕ್ಷ ಕಟ್ಟೆಮನೆ ರಾಕೇಶ್ (9481058358), ಸಲಹೆಗಾರ ಪಾಣತ್ತಲೆ ಜಗದೀಶ್ ಮಂದಪ್ಪ (9448976421), ಖಜಾಂಚಿ ಬಡುವಂಡ್ರ ದುಷ್ಯಂತ್ (8762549217) ಅವರುಗಳನ್ನು ಸಂಪರ್ಕಿಸಬಹುದಾಗಿದೆ ಎಂದರು.

ಗೋಷ್ಠಿಯಲ್ಲಿ ಅಧ್ಯಕ್ಷ ಕಟ್ಟೆಮನೆ ರಾಕೇಶ್, ಕಾರ್ಯದರ್ಶಿ ನವನೀತ್, ಸಲಹೆಗಾರ ಜಗದೀಶ್ ಮಂದಪ್ಪ, ಖಜಾಂಚಿ ಬಡುವಂಡ್ರ ದುಶ್ಯಂತ್, ಪದಾಧಿಕಾರಿಗಳಾದ ಮಂದ್ರಿರ ಸಚಿನ್ ಹಾಗೂ ಪುದಿಯನೆರವನ ರಕ್ಷವ್ ಉಪಸ್ಥಿತರಿದ್ದರು.