ಕೂಡಿಗೆ, ಮಾ. 31: ಕೂಡಿಗೆ ಗ್ರಾಮ ಪಂಚಾಯಿತಿಯ ಮಾಸಿಕ ಸಭೆಯು ಗ್ರಾ.ಪಂ ಅಧ್ಯಕ್ಷೆ ಪ್ರೇಮಲೀಲಾ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆ ಪ್ರಾರಂಭ ಗೊಳ್ಳುತ್ತಿದ್ದಂತೆ ಸದಸ್ಯರುಗಳಾದ ರವಿ, ರಾಮಚಂದ್ರ ಗ್ರಾ.ಪಂ.ನಲ್ಲಿ ಅವ್ಯವಹಾರ ನಡೆದಿದೆ ಎಂದು ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಹಿನ್ನೆಲೆ ಗ್ರಾ.ಪಂ.ನ ಅಧ್ಯಕ್ಷ ಮತ್ತು ಉಪಾಧ್ಯಕ್ಷರು ಯಾವದೇ ಸ್ಪಷ್ಟನೆ ನೀಡದಿರುವದರಿಂದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.

ಗ್ರಾ.ಪಂ. ವ್ಯಾಪ್ತಿಯಲ್ಲಿ ಇರುವ ವಸತಿ ರಹಿತ ಅರ್ಹ ಕುಟುಂಬಗಳನ್ನು ಗುರುತಿಸಿ ಹುದುಗೂರು ಸೀತಾ ಕಾಲೋನಿ ಬಳಿಯಿರುವ ಸರ್ಕಾರಿ ಜಾಗದಲ್ಲಿ ನಿವೇಶನ ಒದಗಿಸಲು ತೀರ್ಮಾನಿಸಲಾಯಿತು.

ಕೂಡಿಗೆ ಗ್ರಾ.ಪಂ. ಸಭಾಂಗಣದಲ್ಲಿ ಅಧ್ಯಕ್ಷೆ ಹೆಚ್.ಎಸ್. ಪ್ರೇಮಲೀಲಾ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಕಳೆದ ಅನೇಕ ವರ್ಷಗಳಿಂದ ಸೂಕ್ತ ವಸತಿ ಸೌಲಭ್ಯವಿಲ್ಲದೆ ವಾಸಿಸುತ್ತಿರುವ ಅರ್ಹ ಬಡಕುಟುಂಬಗಳಿಗೆ ಉಚಿತ ನಿವೇಶನ ಒದಗಿಸಲು ಪ್ರತಿ ವಾರ್ಡಿನಿಂದ ತಲಾ 5 ಮಂದಿ ಫಲಾನುಭವಿಗಳನ್ನು ಗುರುತಿಸಿ ಪಟ್ಟಿ ಸಿದ್ಧಪಡಿಸುವಂತೆ ನಿರ್ಧರಿಸಲಾಯಿತು.

ನದಿ ಅಸುಪಾಸಿನಲ್ಲಿ ಕಸವನ್ನು ಹಾಕದಂತೆ ಕೂಡಲೇ ಸೂಚನಾ ಫಲಕಗಳನ್ನು ಅಳವಡಿಸಬೇಕು ಎಂದು ಕೆ.ವೈ. ರವಿ ಆಗ್ರಹಿಸಿದರು. ಪಂಚಾಯಿತಿ ವ್ಯಾಪ್ತಿ ಹುದುಗೂರು, ಮಾದಲಾಪುರ, ಸೀಗೆಹೊಸೂರು, ಭುವನಗಿರಿ ಮತ್ತಿತರರ ಗ್ರಾಮಗಳು ಅರಣ್ಯದಂಚಿನಲ್ಲಿರುವ ಹಿನ್ನೆಲೆಯಲ್ಲಿ ಕಾಡಾನೆ ಹಾಗೂ ಕಾಡು ಪ್ರಾಣಿಗಳ ಹಾವಳಿ ತೀವ್ರಗೊಂಡಿರುವ ಹಿನ್ನಲೆಯಲ್ಲಿ ಈ ಎಲ್ಲಾ ಗ್ರಾಮಗಳಿಗೂ ಬೀದಿ ದೀಪ ಅಳವಡಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಕುಶಾಲನಗರ ಪ.ಪಂ. ವತಿಯಿಂದ ಪಟ್ಟಣದ ತ್ಯಾಜ್ಯ ವಿಲೇವಾರಿಯನ್ನು ಭುವನಗಿರಿಯಲ್ಲಿ ಮಾಡುತ್ತಿದ್ದು, ವೈಜ್ಞಾನಿಕ ರೀತಿಯಲ್ಲಿ ಕಸವಿಲೇವಾರಿ ಮಾಡುವ ಮೂಲಕ ಆರೋಗ್ಯಕರ ವಾತಾವರಣ ನಿರ್ಮಾಣ ಮಾಡಬೇಕು ಎಂದು ಸೂಚನೆ ನೀಡಿದ ಮೇರೆಗೆ ಕುಶಾಲನಗರ ಪ.ಪಂ. ಮೂರು ತಿಂಗಳ ಕಾಲಾವಕಾಶ ಕೋರಿದ್ದಾರೆ.

ಆದರೆ ಜೂನ್‍ನಲ್ಲಿ ಮಳೆಗಾಲ ಆರಂಭ ವಾಗುವ ಹಿನ್ನೆಲೆ ಮುಂದಿನ ಎರಡು ತಿಂಗಳ ಒಳಗೆ ವೈಜ್ಞಾನಿಕ ಕಸವಿಲೇವಾರಿ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲು ಪತ್ರ ಬರೆಯುವಂತೆ ಪಿಡಿಓ ರವೀಶ್ ಅವರಿಗೆ ಸೂಚಿಸಲಾಯಿತು.

ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳನ್ನು ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಕ್ರಮ ಕೈಗೊಳ್ಳಲಾಗಿದ್ದು, ಕೊಳವೆ ಬಾವಿಗಳು ದುರಸ್ತಿಗೊಂಡರೆ ಕೂಡಲೇ ಸದಸ್ಯರು ಮಾಹಿತಿ ನೀಡಿ ರಿಪೇರಿ ಮಾಡಿಸಲು ಕ್ರಮ ಕೈಗೊಳ್ಳಬೇಕು ಎಂದು ಅಧ್ಯಕ್ಷ್ಷೆ ಪ್ರೇಮಾಲೀಲಾ ಹೇಳಿದರು.

ಸಭೆಯಲ್ಲಿ ಉಪಾಧ್ಯಕ್ಷ ಕೆ.ಟಿ. ಗಿರೀಶ್, ಗ್ರಾ.ಪಂ. ಸದಸ್ಯರುಗಳು, ಅಭಿವೃದ್ಧಿ ಅಧಿಕಾರಿ ಹೆಚ್.ಪಿ. ರವೀಶ್, ಕಾರ್ಯದರ್ಶಿ ಸೋಮಶೇಖರ್ ಇದ್ದರು. ಕೆ.ಸಿ. ರವಿ ಸ್ವಾಗತಿಸಿ, ವಂದಿಸಿದರು.