ದುಬಾರೆ: ನಂಜರಾಯಪಟ್ಟಣಕ್ಕೆ ಒಳಪಡುವ ದುಬಾರೆಯ ಕಾವೇರಿ ನದಿ ದಂಡೆಯಲ್ಲಿ ಸುಮಾರು 100 ವರ್ಷಗಳ ಹಿಂದಿನ ಇತಿಹಾಸವಿರುವ ಕಲ್ಲಿನ ಬಸವನಿಗೆ ಯುಗಾದಿಯಂದು ವಿಶೇಷ ಪೂಜೆ ಸಲ್ಲಿಸಲಾಯಿತು.

ಹಿಂದಿನ ಸಂಪ್ರದಾಯದಂತೆ ಊರಿನವರೆಲ್ಲ ಸೇರಿ ವರ್ಷಕ್ಕೊಮ್ಮೆ ಮಾತ್ರ ಪೂಜೆ ಸಲ್ಲಿಸುವರು. ಯುಗಾದಿಯಂದು ಊರಿನ ನಂಜುಂಡೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿ ಕಲ್ಲಿನ ಬಸವನಿಗೆ ಪೂಜೆ ಸಲ್ಲಿಸಲಾಯಿತು. ಪ್ರಸಾದವನ್ನು ಸೇವಿಸಿ ಯುಗಾದಿ ಆಚರಿಸಲಾಯಿತು.

ಕರಡಿಗೋಡು: ಸಿದ್ದಾಪುರ ಸಮೀಪದ ಕರಡಿಗೋಡು ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನದ ವಾರ್ಷಿಕ ಮಹಾಪೂಜೆ ಪ್ರಯುಕ್ತ 9 ದಿನಗಳ ಕಾಲ ವಿವಿಧ ಕಾರ್ಯಕ್ರಮ ನಡೆಸಲಾಗುತ್ತದೆ. ತಾ. 3 ರಿಂದ 11 ರ ತನಕ ಹಲವು ಪೂಜಾ ವಿಧಿ-ವಿದಾನಗಳು ನೆರವೇರಲಿದೆ. ತಾ. 10 ರಂದು ಬೆಳಿಗ್ಗೆ 7 ಗಂಟೆಗೆ ದೇವರ ಪ್ರಾರ್ಥನೆ, ಗಣಪತಿ ಹೋಮ, 9.30ಕ್ಕೆ ಕಲಶ ಪೂಜೆ, 10.45ಕ್ಕೆ ಗಂಗಾಸ್ನಾನ, ಕಾವೇರಿ ನದಿಯಿಂದ ಶ್ರೀ ಬಸವೇಶ್ವರ ದೇವರ ಪಲ್ಲಕ್ಕಿ ಮೆರವಣಿಗೆ, ಮಧ್ನಾಹ್ನ 12.30ಕ್ಕೆ ಮಹಾಪೂಜೆ ತೀರ್ಥ ಪ್ರಸಾದ ನಂತರ ಅನ್ನಸಂತರ್ಪಣೆ ನಡೆಯಲಿವೆ. ತಾ. 11 ರಂದು ಪೂಜಾ ಕಾರ್ಯಗಳು ನಡೆಯಲಿದೆ ಎಂದು ಕುಕ್ಕುನೂರು ಕುಟುಂಬದ ಆಡಳಿತ ಮಂಡಳಿಯವರು ತಿಳಿಸಿದ್ದಾರೆ. ಈ ಎಲ್ಲಾ ಪೂಜಾ ಕಾರ್ಯ ಬಿಳಿಗೇರಿಯ ಶ್ರೀ ಉದಯಕುಮಾರ್ ತಂತ್ರಿಯವರ ನೇತೃತ್ವದಲ್ಲಿ ನಡೆಯಲಿದೆ.