ಸೋಮವಾರಪೇಟೆ, ಮಾ. 31: ಬೆಳೆಗಾರರು ತಮ್ಮ ತೋಟಗಳಲ್ಲಿ ನೆಟ್ಟು ಬೆಳೆಸಿರುವ ಬಳಂಜಿ ಮರಗಳನ್ನು ಕಡಿದು ಸಾಗಿಸುವ ಸಂದರ್ಭ ಅರಣ್ಯ ಇಲಾಖೆಯ ಅಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಬೆಳೆಗಾರರು, ಇದು ಮುಂದುವರೆದರೆ ಉಗ್ರ ಹೋರಾಟ ಅನಿವಾರ್ಯವಾಗಲಿದೆ ಎಂದು ಎಚ್ಚರಿಕೆ ನೀಡಿದರು.

ಕಾಫಿ ಬೆಳೆಗಾರರ ಹೋರಾಟ ಸಮಿತಿಯ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಿದ ಸದಸ್ಯರುಗಳು, ಕಾಫಿ ತೋಟಗಳಲ್ಲಿ ಬೆಳೆದಿರುವ ಬಳಂಜಿ ಮರದ ಮೇಲೆ ಅರಣ್ಯ ಇಲಾಖೆ ಹಕ್ಕು ಸ್ಥಾಪಿಸಲು ಯತ್ನಿಸುತ್ತಿದೆ. ಮರವನ್ನು ಕಡಿದು ಸಾಗಾಟಗೊಳಿಸಲು ತಡೆಯೊಡ್ಡುತ್ತಿದೆ. ಇದರಿಂದ ಬೆಳೆಗಾರರಿಗೆ ಅನ್ಯಾಯವಾಗುತ್ತಿದ್ದು, ತಕ್ಷಣ ಎಲ್ಲಾ ರೀತಿಯ ನಿರ್ಬಂಧಗಳನ್ನು ತೆರವುಗೊಳಿಸಬೇಕು. ಈ ಬಗ್ಗೆ ಸಂಘಟನೆಯಿಂದ ಅರಣ್ಯ ಇಲಾಖೆ ಮೇಲೆ ಒತ್ತಡ ತರಬೇಕು ಎಂದು ಪದಾಧಿಕಾರಿಗಳು ಅಭಿಪ್ರಾಯಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಹೋರಾಟ ಸಮಿತಿಯ ಅಧ್ಯಕ್ಷ ಎಂ.ಸಿ. ಮುದ್ದಪ್ಪ, ಉಪಾಧ್ಯಕ್ಷರಾದ ಜಲಾ ಹೂವಯ್ಯ, ಶ್ರೀಕೇಶ್, ಕಾರ್ಯದರ್ಶಿ ಸುದೀಪ್, ಖಜಾಂಚಿ ಕೆ.ಎಂ. ದಿನೇಶ್, ವಕ್ತಾರ ಶ್ಯಾಮ್‍ಪ್ರಸಾದ್, ಪ್ರಮುಖರಾದ ಲಿಂಗರಾಜು, ಕುಶಾಲಪ್ಪ, ತಮ್ಮಯ್ಯ ಸೇರಿದಂತೆ ಇತರರು ಉಪಸ್ಥಿತರಿದ್ದರು.