ಶನಿವಾರಸಂತೆ, ಮಾ. 31: ಶನಿವಾರಸಂತೆ ಗ್ರಾಮ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ನಡೆದ ತುರ್ತು ಸಭೆಯ ಅಧ್ಯಕ್ಷತೆಯನ್ನು ಗ್ರಾ.ಪಂ. ಅಧ್ಯಕ್ಷ ಮಹಮ್ಮದ್ ಗೌಸ್ ವಹಿಸಿದ್ದರು.
ಕೊಡಗು ಜಿಲ್ಲಾಧಿಕಾರಿಗಳು ದುಂಡಳ್ಳಿ ಗ್ರಾ.ಪಂ.ಗೆ ಸೇರಿದ ಸರ್ವೆ ನಂ. 42/2 ರಲ್ಲಿ 2 ಎಕರೆ ಜಾಗದಲ್ಲಿ ಶನಿವಾರಸಂತೆ ಗ್ರಾಮ ಪಂಚಾಯಿತಿಗೆ ಕಸ ವಿಲೇವಾರಿಗೆ ಜಾಗವನ್ನು ಕಾಯ್ದಿರಿಸಿ ಮಂಜೂರಾತಿ ಮಾಡಿದ್ದಾರೆ. ಆದರೆ ಮಂಜೂರಾತಿಯಾಗಿರುವ ಜಾಗದಲ್ಲಿ ಕಸ ವಿಲೇವಾರಿ ಮಾಡುವ ಸಂದರ್ಭ ದುಂಡಳ್ಳಿ ಗ್ರಾ.ಪಂ.ಯವರು ಅಡ್ಡಿಪಡಿಸಬಹುದು. ಹಾಗಾಗಿ ಎರಡೂ ಗ್ರಾ.ಪಂ. ಅಧ್ಯಕ್ಷರು, ಎಲ್ಲಾ ಸದಸ್ಯರು, ಗ್ರಾಮದ ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾಗುತ್ತದೆ. ಶನಿವಾರಸಂತೆ ನಗರದ ಕಸ ವಿಲೇವಾರಿ ಸಮಸ್ಯೆಯ ಬಗ್ಗೆ ದುಂಡಳ್ಳಿ ಗ್ರಾ.ಪಂ.ಗೆ ಮನವರಿಕೆ ಮಾಡಿಕೊಡಬೇಕಾಗುತ್ತದೆ ಎಂದು ಸದಸ್ಯ ಅಹಮ್ಮದ್ ಹೇಳಿದರು.
ಉದ್ಯೋಗ ಖಾತ್ರಿ ಯೋಜನೆಯಲ್ಲಿ ತಡೆಗೋಡೆಗಳ ಕಾಮಗಾರಿಗಳನ್ನು ಮಾಡುವಂತೆ ತೀರ್ಮಾನಿಸಲಾಯಿತು. ಜನಪ್ರತಿನಿಧಿಗಳು ಶನಿವಾರಸಂತೆ ಪಂಚಾಯಿತಿಗೆ ಯಾವದೇ ಅನುದಾನ ನೀಡಿರುವದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಭೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷೆ ಗೀತಾ ಹರೀಶ್, ಉಷಾ, ರಜನಿ, ಸೌಭಾಗ್ಯಲಕ್ಷ್ಮಿ, ಸರ್ದಾರ್ ಅಹಮ್ಮದ್, ಆದಿತ್ಯ ಗೌಡ, ಪಾಂಡು, ಹರೀಶ್, ಲೆಕ್ಕಾಧಿಕಾರಿ ಹರಿಣಿ, ಬಿಲ್ ಕಲೆಕ್ಟರ್ ವಸಂತ್, ಕಂಪ್ಯೂಟರ್ ನಿರ್ವಾಹಕಿ ಫೌಜಿಯಾ ಉಪಸ್ಥಿತರಿದ್ದರು. ಅಭಿವೃದ್ಧಿ ಅಧಿಕಾರಿ ಹರೀಶ್ ಸ್ವಾಗತಿಸಿ, ಕಾರ್ಯದರ್ಶಿ ತಮ್ಮಯ್ಯಚಾರ್ ವಂದಿಸಿದರು.