ಸೋಮವಾರಪೇಟೆ, ಮಾ. 31: ಸೋಮವಾರಪೇಟೆಯ ಮೈದಾನದಲ್ಲಿ ಹಾಕಿ ಆಟವಾಡುತ್ತಾ, ಇದೀಗ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿರುವ ಎಸ್.ವಿ. ಸುನಿಲ್, ಏಷ್ಯಾದ ವರ್ಷದ ಆಟಗಾರನಾಗಿ ಆಯ್ಕೆಯಾಗಿರುವದಕ್ಕೆ ತವರು ನೆಲ ಸೋಮವಾರಪೇಟೆಯಲ್ಲಿ ಕ್ರೀಡಾಪ್ರೇಮಿಗಳು ಸಂಭ್ರಮಾಚರಿಸಿದರು. ಇಲ್ಲಿನ ವಿವಿಧ ಸಂಘಟನೆಗಳು ಪಟ್ಟಣದ ಪುಟ್ಟಪ್ಪ ವೃತ್ತದಲ್ಲಿ ಪಟಾಕಿ ಸಿಡಿಸಿ, ಸಿಹಿ ವಿತರಿಸಿ ಸಂಭ್ರಮಿಸಿದರು. ಈ ಸಂದರ್ಭ ಜಿಲ್ಲಾ ಶರಣ ಸಾಹಿತ್ಯ ಪರಿಷತ್‍ನ ಅಧ್ಯಕ್ಷ ಎಸ್. ಮಹೇಶ್ ಮಾತನಾಡಿ, ಪಟ್ಟಣದ ಅರ್ಜುನ್ ಹಾಲಪ್ಪ ಭಾರತ ಹಾಕಿ ತಂಡದ ಉಪ ತರಬೇತುದಾರನಾಗಿ ಆಯ್ಕೆಯಾಗಿದ್ದಾರೆ. ಮತ್ತೋರ್ವ ಅಂತರಾಷ್ಟ್ರೀಯ ಹಾಕಿ ಆಟಗಾರ ಎಸ್.ವಿ. ಸುನಿಲ್ ಏಷ್ಯಾದ ವರ್ಷದ ಆಟಗಾರನಾಗಿ ಆಯ್ಕೆಯಾಗಿರುವದು ಹೆಮ್ಮೆಯ ಸಂಗತಿ ಎಂದು ಶ್ಲಾಘಿಸಿದರು.

ಡಾಲ್ಫಿನ್ಸ್ ಸ್ಪೋಟ್ರ್ಸ್ ಕ್ಲಬ್‍ನ ಅಧ್ಯಕ್ಷ ಅಶೋಕ್ ಮಾತನಾಡಿ, ಅರ್ಜುನ್ ಹಾಗೂ ಸುನಿಲ್ ಇಬ್ಬರು ನಮ್ಮ ಸಂಸ್ಥೆಯ ಒಡನಾಡಿಗಳಾಗಿದ್ದು, ಉತ್ತಮ ಕ್ರೀಡಾ ಪಟುಗಳಾಗಿದ್ದಾರೆ ಎಂದರು.

ಈ ಸಂದರ್ಭ ಭಗತ್‍ಸಿಂಗ್ ಸೇನೆಯ ತಾಲೂಕು ಸಂಚಾಲಕ ಪಿ. ಮಧು, ಜಯಕರ್ನಾಟಕ ಸಂಘಟನೆಯ ಅಧ್ಯಕ್ಷ ಸುರೇಶ್ ಶೆಟ್ಟಿ, ರಕ್ಷಣಾ ವೇದಿಕೆ ಅಧ್ಯಕ್ಷ ದೀಪಕ್, ನಗರಾಧ್ಯಕ್ಷ ಮಂಜುನಾಥ್, ಮಹಿಳಾ ಘಟಕದ ಅಧ್ಯಕ್ಷೆ ರೂಪಾ, ಪ.ಪಂ. ಸದಸ್ಯೆ ಶೀಲಾ ಡಿಸೋಜ, ಪ.ಪಂ. ಮಾಜಿ ಅಧ್ಯಕ್ಷೆ ನಳಿನಿ ಗಣೇಶ್, ಜೆ.ಸಿ. ಸಂಸ್ಥೆ ಕಾರ್ಯದರ್ಶಿ ರುಬೀನಾ, ಜಾನಪದ ಪರಿಷತ್ ಹೋಬಳಿ ಅಧ್ಯಕ್ಷ ಮುರಳೀಧರ್, ಆಟೋಚಾಲಕರ ಸಂಘದ ಕಾರ್ಯದರ್ಶಿ ಗಂಗಾಧರ್, ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಉಪಸ್ಥಿತರಿದ್ದರು.