ಕೂಡಿಗೆ, ಮಾ. 31: ಕುಶಾಲನಗರ ಪಟ್ಟಣ ಪಂಚಾಯ್ತಿಯು ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭುವನಗಿರಿಯಲ್ಲಿ ಹೊಂದಿರುವ ಕಸ ವಿಲೇವಾರಿ ಘಟಕದ ಜಾಗಕ್ಕೆ ಸೋಮವಾರಪೇಟೆ ಪ.ಪಂ.ನ ಕಸವನ್ನು ಸುರಿಯಲು ಬಂದಿದ್ದ 2 ಟ್ರ್ಯಾಕ್ಟರ್‍ಗಳನ್ನು ಭುವನಗಿರಿ ಗ್ರಾಮಸ್ಥರು ಮತ್ತು ಕೂಡಿಗೆ ಗ್ರಾಮ ಪಂಚಾಯಿತಿ ಸದಸ್ಯರು ಕಸ ವಿಲೇವಾರಿ ಘಟಕದೊಳಗಿರಿಸಿ ಬೀಗ ಹಾಕಿದ್ದಾರೆ.

ಕುಶಾಲನಗರ ಪಟ್ಟಣ ಪಂಚಾಯ್ತಿಯು ಕೂಡಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಭುವನಗಿರಿಯಲ್ಲಿ ಕಸ ವಿಲೇವಾರಿ ನಿವೇಶನವನ್ನು ಹೊಂದಿದ್ದು, ಆ ನಿವೇಶನದಲ್ಲಿ ಕಳೆದ ಕೆಲವು ವರ್ಷಗಳಿಂದ ಕಸ ವಿಲೇವಾರಿ ಮಾಡಿ ಅದರ ನಿರ್ವಹಣೆ ಮಾಡುತ್ತಾ ಬಂದಿದೆ. ಇತ್ತೀಚಿನ ಕೆಲವು ತಿಂಗಳುಗಳಿಂದ ಮುಳ್ಳುಸೋಗೆ ಗ್ರಾ.ಪಂನ ಕಸ ವಿಲೇವಾರಿ ಸಮಸ್ಯೆ ಎದುರಾದಾಗ ಆ ಪಂಚಾಯಿತಿಯು ಕುಶಾಲನಗರ ಪ.ಪಂ ನೊಂದಿಗೆ ಮಾತುಕತೆ ನಡೆಸಿ ಮುಳ್ಳುಸೋಗೆ ಗ್ರಾ.ಪಂ ಕಸ ಕೂಡ ಭುವನಗಿರಿಯ ಆ ಪ್ರದೇಶದಲ್ಲೇ ವಿಲೇವಾರಿ ಮಾಡುತ್ತಿತ್ತು. ಆದರೆ ಕೂಡಿಗೆ ಗ್ರಾ.ಪಂನ ಕೆಲವು ಸದಸ್ಯರು ಮತ್ತು ಭುವನಗಿರಿ ಗ್ರಾಮಸ್ಥರು ಕೆಲ ದಿನಗಳ ಹಿಂದೆ ಮುಳ್ಳುಸೋಗೆ ಕಸ ಹಾಕುವದನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ್ದರು.

ಕುಶಾಲನಗರ ಪ.ಪಂ ಮಧ್ಯ ಪ್ರವೇಶಿಸಿ ಕೂಡಿಗೆ ಪಂಚಾಯಿತಿಗೆ ವಿನಂತಿ ಮಾಡಿಕೊಂಡು ತಾತ್ಕಾಲಿಕ ವ್ಯವಸ್ಥೆಯಾಗಿ ಮುಳ್ಳುಸೋಗೆ ಪಂಚಾಯಿತಿಗೆ ಕಸ ವಿಲೇವಾರಿ ಮಾಡಲು ನಾವು ಹಾಕುವ ಸ್ಥಳದಲ್ಲೇ ಅವರಿಗೂ ಕಸ ಹಾಕಲು ಬಿಟ್ಟಿದ್ದೇವೆ. ಸದ್ಯದಲ್ಲೇ ಮುಳ್ಳುಸೋಗೆ ಗ್ರಾ.ಪಂ ಅವರು ಬೇರೆ ವ್ಯವಸ್ಥೆ ಮಾಡಿಕೊಳ್ಳುತ್ತಾರೆ ಎಂದು ಹೇಳಿದ್ದರು. ತೀವ್ರ ಪ್ರತಿರೋಧ ಒಡ್ಡಿದ್ದ ಭುವನಗಿರಿ ಗ್ರಾಮಸ್ಥರು ಒಂದು ವಾರದ ಗಡುವುಕೊಟ್ಟು ಮುಳ್ಳುಸೋಗೆ ಗ್ರಾ.ಪಂ ಕಸಕ್ಕೆ ಅವಕಾಶ ಕೊಟ್ಟಿದ್ದರು. ಆ ಗಡುವು ತೀರಿದರು ಮುಳ್ಳುಸೋಗೆ ಗ್ರಾ.ಪಂ ಇನ್ನೂ ಸಮರ್ಪಕ ವ್ಯವಸ್ಥೆ ಮಾಡಿಕೊಂಡಿಲ್ಲ.

ಈ ನಡುವೆ ಕೂಡಿಗೆ ಗ್ರಾ.ಪಂ.ನ ಸದಸ್ಯರಾದ ಕೆ.ವೈ ರವಿ, ಮಂಜಯ್ಯ, ಕೂಡುಮಂಗಳೂರು ಬಿ.ಜೆ.ಪಿ. ಯುವ ಮೋರ್ಚಾದ ಅಧ್ಯಕ್ಷ ಶಶಿಕಿರಣ್, ರೈತ ಮುಖಂಡರಾದ ಶಿವಮೂರ್ತಿ, ರಾಜು ಸೇರಿದಂತೆ ಸುಮಾರು 50ಕ್ಕೂ ಅಧಿಕ ಗ್ರಾಮಸ್ಥರು ಸೇರಿ ಕಸ ತುಂಬಿದ 2 ಟ್ರ್ಯಾಕ್ಟರ್‍ಗಳನ್ನು ಒಳಗೆ ಇರಿಸಿಯೇ ಬೀಗ ಹಾಕಿದರು.

ಘಟಕದ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದ ಕುಶಾಲನಗರ ಪ.ಪಂ.ನ ನೌಕರ ಬಾಬು ಅವರನ್ನು ಗ್ರಾಮಸ್ಥರು, ತೀವ್ರ ತರಾಟೆಗೆ ತೆಗೆದುಕೊಂಡರು. ಇದೇ ಸಂದರ್ಭ ಕೂಡ್ಲೂರು ಕೈಗಾರಿಕಾ ವಲಯದ ಖಾಸಗಿ ಕಾರ್ಖಾನೆಯೊಂದರ ತ್ಯಾಜ್ಯಗಳನ್ನು ಹೊತ್ತು ತಂದ ಮಿನಿ ಲಾರಿಯೊಂದು ಇಲ್ಲಿಗೆ ಕಸ ಸುರಿಯಲೆಂದೇ ಬಂದಿತ್ತು. ಇಲ್ಲಿಯ ಗ್ರಾಮಸ್ಥರ ಗಲಾಟೆ ನೋಡಿ ಅಲ್ಲಿಂದ ಹಿಂತಿರುಗಿ ಪಲಾಯನ ಮಾಡಿದ ಘಟನೆಯೂ ನಡೆಯಿತು.

ಸ್ಥಳಕ್ಕೆ ಆಗಮಿಸಿದ್ದ ಕುಶಾಲನಗರ ಪ.ಪಂ.ನ ಆರೋಗ್ಯ ಅಧಿಕಾರಿ ಲಿಂಗರಾಜು ಸ್ಥಳದಲ್ಲಿ ನಡೆದ ಘಟನೆಗಳನ್ನು ಕಾರ್ಯ ನಿರ್ವಹಣಾಧಿಕಾರಿ ಶ್ರೀಧರ್ ಅವರ ಗಮನಕ್ಕೆ ತಂದರು. ಅವರ ಸಲಹೆಯಂತೆ ಕುಶಾಲನಗರ ಪ.ಪಂ.ನ ಕಸ ವಿಲೇವಾರಿ ಘಟಕಕ್ಕೆ ಭುವನಗಿರಿಯಲ್ಲಿ ಅತಿಕ್ರಮ ಪ್ರವೇಶ ಮಾಡಿದ ಸೋಮವಾರಪೇಟೆ ಪ.ಪಂ.ನ ಆಡಳಿತ ವ್ಯವಸ್ಥೆಯ ಮೇಲೆ ಕುಶಾಲನಗರ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.