ವೀರಾಜಪೇಟೆ, ಮಾ. 31: ವೀರಾಜಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಸ್ಥಿತಿಯಲ್ಲಿರುವ 20ಬೋರ್‍ವೆಲ್ ಹಾಗೂ 10 ತೆರೆದ ಬಾವಿಗಳಿಂದ ಬೇತರಿ ಗ್ರಾಮದ ಕಾವೇರಿ ಹೊಳೆಯನಲ್ಲಿ ನೀರಿನ ಜೊತೆಯಲ್ಲಿ ನೀರನ್ನು ಪೊರೈಸಲಾಗುತ್ತಿದೆ ಎಂದು ಪಟ್ಟಣ ಪಂಚಾಯಿತಿ ಅಧ್ಯಕ್ಷ ಕೂತಂಡ ಸಚಿನ್ ಕುಟ್ಟಯ್ಯ ತಿಳಿಸಿದರು. ಹಿಂದಿನ ದಾಖಲೆಯ ಪ್ರಕಾರ ಕಳೆದ 2001ರಲ್ಲಿ 15,206 ಜನಸಂಖ್ಯೆಯ ಆಧಾರದ ಮೇಲೆ ಪ್ರತಿಯೊಬ್ಬರಿಗೆ ಪ್ರತಿ ದಿನಕ್ಕೆ ತಲಾ 70 ಲೀಟರ್‍ಗಳಷ್ಟು ನೀರು ಸರಬರಾಜು ಮಾಡಲು ನಿಗದಿಪಡಿಸಲಾಗಿತ್ತು. 2017ರಲ್ಲಿ 17,246 ಜನಸಂಖ್ಯೆ ಇದ್ದು ಈಗ ತಜ್ಞರ ವಿಭಾಗ ನೀರು ಸರಬರಾಜನ್ನು ಪರಿಷ್ಕರಿಸಿ ಒಬ್ಬರಿಗೆ ತಲಾ 135 ಲೀಟರ್‍ಗಳಷ್ಟು ನೀರನ್ನು ವಿತರಣೆ ಮಾಡಲು ನಿಗದಿಪಡಿಸಿದ್ದರೂ ನೀರಿನ ಕೊರತೆಯಿಂದ ತಲಾ ಒಬ್ಬರಿಗೆ 108 ಲೀಟರ್‍ನಷ್ಟು ಮಿತಿಗೊಳಪಟ್ಟು ನೀರನ್ನು ಸರಬರಾಜು ಮಾಡಲಾಗುತ್ತಿದೆ. 2001ರಲ್ಲಿ ಕಾವೇರಿ ಹೊಳೆಯ ಮೂಲ ಸ್ಥಾವರದಿಂದ ನಿರಂತರವಾಗಿ ಪ್ರತಿದಿನ ಸುಮಾರು 10,50,000 ಲೀಟರ್‍ಗಳಷ್ಟು ನೀರು ಸರಬರಾಜು ಆಗುತಿತ್ತು. 2017ರಲ್ಲಿ ಒಬ್ಬರಿಗೆ ತಲಾ 108 ಲೀಟರ್‍ಗಳಷ್ಟು ನೀರು ಸರಬರಾಜು ಮಾಡಲಾಗುತ್ತಿದೆ. ಈ ಪ್ರಕಾರ ವಿರಾಜಪೇಟೆ ಪಟ್ಟಣಕ್ಕೆ ಒಟ್ಟು 18,50,000 ಲೀಟರ್ ಅವಶ್ಯಕತೆ ಇದೆ. ಈಗ ಕಾವೇರಿ ಹೊಳೆಯ ಮೂಲ ಸ್ಥಾವರದಿಂದ ಸುಮಾರು 15 ಲಕ್ಷಗಳಷ್ಟು ನೀರು ಸರಬರಾಜಾದರೂ 3.50,000 ಲೀಟರ್‍ನಷ್ಟು ನೀರಿನ ಕೊರತೆಯನ್ನು 20ಬೋರ್‍ವೆಲ್, 10 ತೆರೆದ ಬಾವಿಗಳಿಂದ ಸರಿದೂಗಿಸಲಾಗುತ್ತಿದೆ. ಬರದ ಛಾಯೆಯಲ್ಲೂ ವೀರಾಜಪೇಟೆ ಪಟ್ಟಣದಲ್ಲಿ ಕುಡಿಯುವ ನೀರಿಗೆ ಪಟ್ಟಣ ಪಂಚಾಯಿತಿ ವಿಶೇಷ ಗಮನ ನೀಡುತ್ತಿದೆ ಎಂದು ಸಚಿನ್ ಕುಟ್ಟಯ್ಯ ತಿಳಿಸಿದರು.

ಬೇತರಿ ಗ್ರಾಮದ ಕಾವೇರಿ ಹೊಳೆಯ ನೀರು ಸರಬರಾಜು ಕೇಂದ್ರದ ಮೂಲ ಸ್ಥಾವರದಲ್ಲಿ ಎರಡು ಮೋಟಾರ್‍ಗಳು, ಒಂದು ಮೀಸಲು ಜನರೇಟರ್ ಸೇರಿದಂತೆ ಎರಡು ಜನರೇಟರ್‍ಗಳು, ಶಿವಕೇರಿಯಲ್ಲಿ ಎರಡು ಜನರೇಟರ್‍ಗಳು, ಇತರ ಎಲ್ಲಾ ನೀರು ಶೇಖರಣಾ ಕೇಂದ್ರದಲ್ಲಿ ಎರಡು ಮೋಟಾರ್‍ಗಳನ್ನು ಅಳವಡಿಸಿ

ನೀರು ಸರಬರಾಜು ಮಾಡಲಾಗುತ್ತಿದೆ. ನೀರು ಪೊರೈಕೆಯಲ್ಲಿ ವಿಳಂಬವಾದರೂ ನೀರನ್ನು ವಿತರಿಸಲಾಗುತ್ತಿದೆ. ತಾಂತ್ರಿಕ ದೋಷದಿಂದ ನೀರು ಸರಬರಾಜಿನಿಂದ

ವ್ಯತ್ಯಯ ಕಂಡು ಬಂದರೂ ತಕ್ಷಣ ಸರಿಪಡಿಸಿ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಪಟ್ಟಣ ಪಂಚಾಯಿತಿಯ ನೀರು ಸರಬರಾಜಿನ ಉಸ್ತುವಾರಿಯಲ್ಲಿರುವ ಅಭಿಯಂತರ ಎನ್.ಪಿ. ಹೇಮ್‍ಕುಮಾರ್ ತಿಳಿಸಿದರು.

ವೀರಾಜಪೇಟೆ ಬೇತರಿ ಗ್ರಾಮದ ಕಾವೇರಿ ಹೊಳೆಯ ನಲ್ಲಿ ನೀರು ಸರಬರಾಜು ಕೇಂದ್ರದಲ್ಲಿನ್ನು ನೀರು ಪೊರೈಕೆಯನ್ನು ಸುಗಮಗೊಳಿಸಲು ಈಚೆಗೆ ಕೇಂದ್ರದ ಬಳಿಯ ಜಾಕ್‍ವೆಲ್‍ನಲ್ಲಿ ಮರಳು ತೆಗೆದು ದುರಸ್ತಿಪಡಿಸಲಾಗಿದೆ ಎಂದು ಹೇಮ್ ಕುಮಾರ್ ಹೇಳಿದರು.