ಮಡಿಕೇರಿ, ಏ. 1: ಬಿಳಿ ಕಾಂಡ ಕೊರಕದ ಬೇಸಿಗೆ ಕಾಲದಲ್ಲಿ ಹಾರಾಟ ಏಪ್ರಿಲ್‍ನಿಂದ ಶುರುವಾಗಲಿದ್ದು, ಪ್ರೌಢ ಕೀಟವು ಹೆಚ್ಚಿನ ಸಂಖ್ಯೆಯಲ್ಲಿ ಹೊರ ಬಂದು ಹೊಸ ಜೀವನ ಚಕ್ರವು ಪ್ರಾರಂಭಗೊಳ್ಳಲು ಅನುಕೂವಾದ ಸಮಯವಾಗಿರುತ್ತದೆ. ಆದುದರಿಂದ ಬೆಳೆಗಾರರು ಅನುಸರಿಸಬೇಕಾದ ಕ್ರಮಗಳು ಇಂತಿದೆ.

ಹೂ ಮಳೆ ಬಂದ ಪ್ರದೇಶಗಳಲ್ಲಿ, ಬೆಳೆಗಾರರು ಇಡಿ ತೋಟದಲ್ಲಿ ಕೀಟ ಬಾದಿತ ಗಿಡಗಳನ್ನು ಹುಡುಕಿ, ಕಿತ್ತು ನಾಶ ಮಾಡಬೇಕು. ಆ ನಂತರ ಕ್ಲೋಕೋಫೈರಿಫಾಸ್ 50 ಇ.ಸಿ. ಮತ್ತು ಸೈಪರ್ ಮೆತ್ರಿನ್ 5 ಇ.ಸಿ. ಹೊಂದಿರುವ ಕೀಟನಾಶಕವನ್ನು, 200 ಲೀಟರ್ ನೀರಿಗೆ 240 ಮಿ.ಲೀ ಪ್ರಮಾಣದಲ್ಲಿ, 200 ಮಿ.ಲೀ. ಅಂಟು ದ್ರಾವಣದ ಜೊತೆಗೆ ಬೆರೆಸಿ ಮುಖ್ಯ ಕಾಂಡ ಮತ್ತು ದಪ್ಪ ರೆಂಬೆಗಳ ಮೇಲೆ ಸಿಂಪಡಿಸಬೇಕು. ಈ ಸಿಂಪರಣೆಯು, ಬಿಳಿ ಕಾಂಡ ಕೊರಕದ ಹೊಸ ಜೀವನ ಚಕ್ರವು ಪ್ರಾರಂಭಗೊಳ್ಳುವದನ್ನು ತಡೆಗಟ್ಟುವಲ್ಲಿ ಉಪಯುಕ್ತವಾಗುತ್ತದೆ.

ಹೂ ಮಳೆ ಬಂದಿರದ ಪ್ರದೇಶಗಳಲ್ಲಿ ಕೀಟ ಬಾದಿತ ಗಿಡಗಳನ್ನು ಬಾಡಿದ ಗಿಡಗಳೊಂದಿಗೆ ಹುಡುಕುವದು ಕಷ್ಟಕರವಾಗಿರುತ್ತದೆ. ಆದುದರಿಂದ ಬೆಳೆಗಾರರು, ಕ್ಲೋರೋಪೈರಿಫಾಸ್ 50 ಇ.ಸಿ. ಮತ್ತು ಸೈಪರ್ ಮೆತ್ರಿನ್ 5 ಇ.ಸಿ. ಹೊಂದಿರುವ ಕೀಟನಾಶಕವನ್ನು, 200 ಲೀಟರ್ ನೀರಿಗೆ 240 ಮಿ.ಲೀ. ಪ್ರಮಾಣದಲ್ಲಿ, 200 ಮಿ.ಲೀ. ಅಂಟು ದ್ರಾವಣದ ಜೊತೆಗೆ ಬೆರೆಸಿ ಮುಖ್ಯ ಕಾಂಡ ಮತ್ತು ದಪ್ಪ ರೆಂಬೆಗಳ ಮೇಲೆ ಸಿಂಪಡಿಸಬೇಕು. ಹೂ ಮಳೆ ಬಂದ ನಂತರ ಇಡೀ ತೋಟದಲ್ಲಿ ಕೀಟಬಾಧಿತ ಗಿಡಗಳನ್ನು ಹುಡುಕಿ, ಕಿತ್ತು ನಾಶ ಮಾಡಬೇಕು. ಅಥವಾ ಕೀಟಬಾಧಿತ ಗಿಡಗಳ ಮುಖ್ಯ ಕಾಂಡ ಮತ್ತು ದಪ್ಪ ರೆಂಬೆಗಳನ್ನು ಗೋಣಿ ಚೀಲದ ಪಟ್ಟಿಯಿಂದ ಅಂತರ ಬಿಡದಂತೆ ಸುತ್ತಬೇಕು. ಅಂತಹ ಗೋಣಿಚೀಲ ಸುತ್ತಿದ ಕೀಟಬಾಧಿತ ಗಿಡಗಳಿಗೆ ಕ್ಲೋರೋಫೈರಿಫಾಸ್ 50 ಇ.ಸಿ. ಮತ್ತು ಸೈಪರ್ ಮೆತ್ರಿನ್ 5 ಇ.ಸಿ. ಹೊಂದಿರುವ ಕೀಟನಾಶಕವನ್ನು, 200 ಲೀಟರ್ ನೀರಿಗೆ 240 ಮಿ.ಲೀ. ಪ್ರಮಾಣದಲ್ಲಿ, 200 ಮಿ.ಲೀ. ಅಂಟು ದ್ರಾವಣದ ಜೊತೆಗೆ ಬೆರೆಸಿ ಮುಖ್ಯ ಕಾಂಡ ಮತ್ತು ದಪ್ಪ ರೆಂಬೆಗಳ ಮೇಲೆ ಸಿಂಪಡಿಸಬೇಕು. ಈ ಕ್ರಮದಿಂದ ಪ್ರೌಢ ಕೀಟಗಳು ಹೊರಬರುವದನ್ನು ತಡೆಗಟ್ಟಬಹುದು. ಈ ಹತೋಟಿ ಕ್ರಮಗಳನ್ನು ಏಪ್ರಿಲ್ ಎರಡನೇ ವಾರದೊಳಗೆ ಮುಗಿಸಬೇಕು ಎಂದು ಕೇಂದ್ರಿಯ ಕಾಫಿ ಸಂಶೋಧನ ಸಂಸ್ಥೆಯ ಸಂಶೋಧನ ನಿರ್ದೇಶಕರು ತಿಳಿಸಿದ್ದಾರೆ.