ಆಲೂರು ಸಿದ್ದಾಪುರ/ ಒಡೆಯನಪುರ, ಏ. 1: ‘ನಿಸ್ವಾರ್ಥ ಸೇವಾ ಮನೋಭಾವನೆ, ಲೋಕಪಾಲನ ಚಿಂತನೆ ಹಾಗೂ ಆಧ್ಯಾತ್ಮಿಕ ಚಿಂತನೆಗಳಿಂದ ಮನುಷ್ಯನ ಆರೋಗ್ಯ ವೃದ್ದಿಯಾಗಿ ತುಂಬು ಜೀವನ ನಡೆಸಬಹುದು’ ಎಂದು ಯಸಳೂರು ತೆಂಕಲಗೋಡು ಬ್ರಹನ್ಮಠದ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ಅಭಿಪ್ರಾಯ ಪಟ್ಟರು. ಅವರು ಶನಿವಾರಸಂತೆ ಸಮಿಪದ ಹಂಡ್ಲಿ ಸರಕಾರಿ ಪ್ರೌಢಶಾಲಾ ಮೈದಾನದಲ್ಲಿ ತುಮಕೂರು ಸಿದ್ದಗಂಗೆ ಮಠದ ಡಾ.ಶಿವಕುಮಾರ ಸ್ವಾಮೀಜಿ ಅವರ 110ನೇ ಜನ್ಮ ದಿನಾಚರಣೆ ಮಹೋತ್ಸವ ಹಾಗೂ ಯುವಕ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

ತಪೋವನ ಮನೆಹಳ್ಳಿ ಮಠದ ಮಹಾಂತ ಶಿವಲಿಂಗ ಸ್ವಾಮೀಜಿ ಮಾತನಾಡಿ-ಪ್ರತಿಯೊಬ್ಬರು ತಮ್ಮ ಆರೋಗ್ಯವನ್ನು ಬಹುದೊಡ್ಡ ಸಂಪತ್ತು ಎಂದು ಭಾವಿಸಿಕೊಂಡರೆ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಜೀವನ ನಡೆಸಬಹುದು ಎಂದರು.ಮುದ್ದಿನಕಟ್ಟೆ ಮಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ-ತಾಯಿಂದಿರು ಮಕ್ಕಳಿಗೆ ಮೊದಲ ಗುರುಗಳಾಗುತ್ತಾರೆ, ಈ ನಿಟ್ಟಿನಲ್ಲಿ ಪೋಷಕರು ತಮ್ಮ ಮಕ್ಕಳಿಗೆ ಒಳ್ಳೆಯ ಮೌಲ್ಯಾಧಾರಿತ ವಿಚಾರಗಳನ್ನು ಹೇಳಿಕೊಡಬೇಕು. ಡಾ. ಶಿವಕುಮಾರಸ್ವಾಮೀಜಿ ಅವರನ್ನು ಪ್ರೇರಣೆಯಾಗಿ ಸಮಾಜಕ್ಕೆ ಕೊಡುಗೆಯನ್ನು ನೀಡಬೇಕೆಂದರು.

ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಮಾತನಾಡಿ- ಸಿದ್ದಗಂಗೆ ಮಠಾದೀಶ ಡಾ.ಶಿವಕುಮಾರಸ್ವಾಮೀಜಿಗಳು ಶಿಕ್ಷಣ, ಆರೋಗ್ಯ ಸೇವೆ ಹಾಗೂ ಸಮಾಜ ಸೇವೆಗೆ ಅಪಾರ ಕೊಡುಗೆಯನ್ನು ನೀಡಿದ್ದಾರೆ ಎಂದರು. ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷ ಡಿ.ಬಿ.ಧರ್ಮಪ್ಪ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಮಹೇಶ್, ಪ್ರಮುಖರಾದ ಕೆ.ವಿ.ಮಂಜುನಾಥ್, ಶಾಂತವೇರಿ ವಸಂತ್ ಮುಂತಾದವರು ಇದ್ದರು.

ಶ್ರೀಗಳ ಜನ್ಮಮಹೋತ್ಸವದ ಅಂಗವಾಗಿ ಯುವಕ ಸಂಘದ ವತಿಯಿಂದ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿತು. ಮನೆಹಳ್ಳಿಮಠದ ಮಹಾಂತ ಶಿವಲಿಂಗಸ್ವಾಮೀಜಿ ಅವರು ರಕ್ತ ದಾನ ಮಾಡುವದರ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು. ರಕ್ತದಾನ ಶಿಬಿರದಲ್ಲಿ ಹಲವಾರು ಜನರು ಬಂದು ರಕ್ತದಾನ ಮಾಡಿದರು.

ಕುಶಾಲನಗರ: ಸಿದ್ದಗಂಗಾ ಕ್ಷೇತ್ರದ ಡಾ. ಶಿವಕುಮಾರ ಸ್ವಾಮೀಜಿ ಅವರ 110ನೇ ಜನ್ಮದಿನಾಚರಣೆ ಅಂಗವಾಗಿ ಕುಶಾಲನಗರದ ಸುತ್ತಮುತ್ತ ವಿವಿಧ ಸಂಘಟನೆಗಳಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಜಿಲ್ಲಾ ವಚನ

(ಮೊದಲ ಪುಟದಿಂದ) ಸಾಹಿತ್ಯ ಪರಿಷತ್ ಹಾಗೂ ಪಟ್ಟಾಲದಮ್ಮ ಮತ್ತು ಶ್ರೀ ಮುನೇಶ್ವರ ದೇವತಾ ಸಮಿತಿ ಆಶ್ರಯದಲ್ಲಿ ಸರಳ ಕಾರ್ಯಕ್ರಮ ನಡೆಯಿತು.

ಕುಶಾಲನಗರ ಅಯ್ಯಪ್ಪಸ್ವಾಮಿ ದೇವಾಲಯ ಬಳಿಯ ಕಾವೇರಿ ನದಿಯಿಂದ ಪೂರ್ಣಕುಂಭ ಗಳೊಂದಿಗೆ ಅಲಂಕೃತ ಮಂಟಪದಲ್ಲಿ ಶ್ರೀಗಳ ಭಾವಚಿತ್ರವನ್ನು ಅಳವಡಿಸಿ ಮಂಗಳವಾದ್ಯದೊಂದಿಗೆ ನಗರದ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ನಡೆಯಿತು. ಕುಶಾಲನಗರ ಪಟ್ಟಣ ಪಂಚಾಯ್ತಿ ಅಧ್ಯಕ್ಷ ಎಂ.ಎಂ. ಚರಣ್ ಮತ್ತು ಕೊಡಗು ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಬಿ.ಭಾರತೀಶ್ ಮೆರವಣಿಗೆಗೆ ಚಾಲನೆ ನೀಡಿದರು. ಕುಶಾಲನಗರ ಪೌರಕಾರ್ಮಿಕರ ಕುಟುಂಬ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮೆರವಣಿಗೆಗೆ ಶೋಭೆ ತಂದರು.

ಈ ಸಂದರ್ಭ ಜಿಲ್ಲಾ ವಚನ ಸಾಹಿತ್ಯ ಪರಿಷತ್‍ನ ಅಧ್ಯಕ್ಷ ಕೆ.ಎಸ್.ಮೂರ್ತಿ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎ.ಎಂ. ಶ್ರೀಧರ್, ನಗರ ಬಿಜೆಪಿ ಅಧ್ಯಕ್ಷ ಕೆ.ಜಿ.ಮನು, ಯುವ ಮೋರ್ಚಾ ತಾಲೂಕು ಪ್ರಧಾನ ಕಾರ್ಯದರ್ಶಿ ಎಂ.ಡಿ.ಕೃಷ್ಣಪ್ಪ, ಕುಶಾಲನಗರ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಂ.ಎನ್. ಚಂದ್ರಮೋಹನ್, ಅಯ್ಯಪ್ಪಸ್ವಾಮಿ ದೇವಾಲಯದ ಅರ್ಚಕರಾದ ಕೃಷ್ಣಮೂರ್ತಿ ಭಟ್ ಮತ್ತು ವಿಷ್ಣುಮೂರ್ತಿ ಭಟ್ ಮತ್ತಿತರರು ಇದ್ದರು. ನಂತರ ಅನ್ನಸಂತರ್ಪಣೆ ನಡೆಯಿತು.

ಕುಶಾಲನಗರ ಬಸವೇಶ್ವರ ದೇವಾಲಯದಲ್ಲಿ ಸ್ಥಳೀಯ ವೀರಶೈವ ಸಮಾಜದ ಆಶ್ರಯದಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮೂಲಕ ಶ್ರೀಗಳಿಗೆ ಇನ್ನೂ ಹೆಚ್ಚಿನ ಆರೋಗ್ಯ ಕರುಣಿಸುವಂತೆ ಕೋರಲಾಯಿತು. ಸಮಾಜದ ಅಧ್ಯಕ್ಷ ಎಂ.ಎಸ್. ಶಿವಾನಂದ, ಸಮಿತಿಯ ಗೌರವಾಧ್ಯಕ್ಷರಾದ ಧನರಾಜ್, ಲೋಕೇಶ್, ಅಕ್ಕನ ಬಳಗದ ಅಧ್ಯಕ್ಷೆ ವಿಜಯಮ್ಮ, ಪ್ರಮುಖರಾದ ಹೆಚ್.ವಿ.ಶಿವಪ್ಪ, ವಿರೂಪಾಕ್ಷ, ಮಧುಸೂದನ್ ಇದ್ದರು.

ಗುಡ್ಡೆಹೊಸೂರು : ಇಲ್ಲಿನ ಬೊಳ್ಳೂರು ಗ್ರಾಮದ ಶ್ರೀ ಬಸವೇಶ್ವರ ಮತ್ತು ಶ್ರೀ ಚೌಡೇಶ್ವರಿ ದೇವಸ್ಥಾನ ಸಮಿತಿ ವತಿಯಿಂದ ಶತಾಯುಷಿ ಡಾ| ಶಿವಕುಮಾರ ಸ್ವಾಮಿಜಿಯವರ 110ನೇ ಹುಟ್ಟುಹಬ್ಬವನ್ನು ಆಚರಿಸಲಾಯಿತು. ದೇವಸ್ಥಾನದಲ್ಲಿ ದೇವರಿಗೆ ಅರ್ಚನೆ ಮಾಡಿ ನಂತರ ಗ್ರಾಮಸ್ಥರು ಆರ್ಶಿವಾದ ಪಡೆದರು. ಈ ಸಂಧರ್ಭ ಗ್ರಾಮದ ಹಿರಿಯರಾದ ಸಿದ್ದಲಿಂಗಪ್ಪ, ಮತ್ತು ಸಮಿತಿಯ ಸದಸ್ಯರಾದ ಮಲ್ಲಿಕಾರ್ಜುನ, ಪಾಪಣ್ಣ, ಶುಭ ಶೇಖರ್, ರಾಜಪ್ಪ, ಸೇರಿದಂತೆ ಹಲವಾರು ಮಂದಿ ಭಾಗವಹಿಸಿದ್ದರು.