ಸಿದ್ದಾಪುರ, ಏ. 1: ಜಿಲ್ಲೆಯ ಗ್ರಾಮೀಣ ಕ್ರೀಡಾ ಪಟುಗಳನ್ನು ಗುರುತಿಸಿ ಮುಂದೆ ತರುವ ಸಲುವಾಗಿ ಸಿದ್ದಾಪುರದ ಸಿಟಿ ಬಾಯ್ಸ್ ಯುವಕ ಸಂಘದಿಂದ ಐಪಿಎಲ್ ಮಾದರಿಯಲ್ಲಿ ಕೊಡಗು ಚಾಂಪಿಯನ್ಸ್ ಲೀಗ್ (ಕೆಸಿಎಲ್) ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. ದ್ವಿತೀಯ ಆವೃತ್ತಿಯ ಕ್ರೀಡಾಕೂಟ ತಾ. 15 ರಿಂದ ಸಿದ್ದಾಪುರದ ಪ್ರೌಢಶಾಲಾ ಮೈದಾನದಲ್ಲಿ ಚಾಲನೆಗೊಳ್ಳಲಿದ್ದು, ಈಗಾಗಲೇ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಕೆಸಿಎಲ್ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಎ. ಅಜೀಜ್ ತಿಳಿಸಿದ್ದಾರೆ.

ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಎರಡು ಹಂತದ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಫ್ರಾಂಚೈಸಿಗಳು ಆಟಗಾರರನ್ನು ಖರೀದಿ ಮಾಡಲಾಗಿದೆ. ಪಂದ್ಯಾವಳಿಗೆ ಜಿಲ್ಲೆಯ ವಿವಿಧೆಡೆಗಳಿಂದ 210 ಆಟಗಾರರನ್ನು ಒಳಗೊಂಡ 14 ತಂಡಗಳು ಭಾಗವಹಿಸಲಿದ್ದು, 6 ದಿನಗಳ ಕಾಲ ಲೀಗ್ ಮಾದರಿಯಲ್ಲಿ ಪಂದ್ಯಾವಳಿ ನಡೆಯಲಿದೆ. ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ವಿವಿಧ ಕ್ರೀಡೆಗಳಲ್ಲಿ ಸಾಧನೆ ಮಾಡಿರುವ ಕ್ರೀಡಾಪಟುಗಳು, ಚಿತ್ರ ನಟರು, ಸಚಿವರು, ಶಾಸಕರು ಸೇರಿದಂತೆ ಹಲವು ಗಣ್ಯ ವ್ಯಕ್ತಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದರು.

ಕೆಸಿಎಲ್ ಸಮಿತಿ ಸದಸ್ಯ ಕೆ.ಕೆ. ರೆಜಿತ್ ಕುಮಾರ್ ಮಾತನಾಡಿ, ಕೆಸಿಎಲ್ ಉದ್ಘಾಟನಾ ಸಮಾರಂಭದ ಅಂಗವಾಗಿ 210 ಆಟಗಾರರು ಹಾಗೂ ಕ್ರೀಡಾಭಿಮಾನಿಗಳ ಮತ್ತು ಕಲಾ ತಂಡಗಳೊಂದಿಗೆ ಸಿದ್ದಾಪುರ ಮುಖ್ಯ ಬೀದಿಯಲ್ಲಿ ಕ್ರೀಡಾ ಜ್ಯೋತಿಯೊಂದಿಗೆ ಮೆರವಣಿಗೆ ನಡೆಯಲಿದ್ದು, ಕೊಡಗು ಜಿಲ್ಲಾ ಪೊಲೀಸ್ ಹಾಗೂ ಪತ್ರಕರ್ತರ ತಂಡದ ನಡುವೆ ಪ್ರದರ್ಶನ ಪಂದ್ಯಾಟ ನಡೆಯಲಿದೆ ಎಂದರು. ತಾ. 20 ರಂದು ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಪ್ರಥಮ ಬಹುಮಾನ ರೂ. 1.11 ಲಕ್ಷ ನಗದು ಮತ್ತು ಟ್ರೋಫಿ ಹಾಗೂ ಫೈನಲ್‍ನಲ್ಲಿ ಸೋಲನುಭವಿಸಿದ ತಂಡಕ್ಕೆ ರೂ. 55,555 ನಗದು ಮತ್ತು ಆಟಗಾರರಿಗಾಗಿ ಹಲವು ವೈಯಕ್ತಿಕ ಬಹುಮಾನಗಳನ್ನು ನೀಡಲಾಗುವದು ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಎಂ.ಎಂ. ಹಾರಿಸ್, ಕಾರ್ಯದರ್ಶಿ ಎ.ಎಸ್. ಮುಸ್ತಫಾ, ಸದಸ್ಯ ಶಾನವಾಸ್ ಇದ್ದರು.