ಮಡಿಕೇರಿ, ಏ. 1: ವಿ ಫೈ ಆಫ್ ರೋಡರ್ಸ್ ಕೂರ್ಗ್ ಸಂಸ್ಥೆಯ ಸಹಕಾರದೊಂದಿಗೆ ಇದೇ ಪ್ರಥಮ ಬಾರಿಗೆ ಅಮ್ಮತ್ತಿಯಲ್ಲಿ ತಾ. 22 ರಂದು ‘ಅಮ್ಮತ್ತಿ ರ್ಯಾಲಿ ಕ್ರಾಸ್-2017’ ನಡೆಯಲಿದೆ ಎಂದು ಆಯೋಜಕರಾದ ಚೇತನ್ ಚಂಗಪ್ಪ ಮತ್ತು ಯು.ಬಿ. ತಿಮ್ಮು ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಮ್ಮತ್ತಿ ಮತ್ತು ವೀರಾಜಪೇಟೆ ಮಾರ್ಗದ ಗದ್ದೆ-ಬಯಲುಗಳ ನಡುವಣ 3 ಕಿ.ಮೀ. ದೂರದ ಹಾದಿಯಲ್ಲಿ ರ್ಯಾಲಿ ಕ್ರಾಸ್‍ನ್ನು ಆಯೋಜಿಸಲಾಗಿದೆ ಎಂದರು. ಏರು-ತಗ್ಗಿನ ಕಡಿದಾದ ಮಾರ್ಗದಲ್ಲಿ ನಡೆಯುವ ಈ ಸ್ಪರ್ಧೆ ಸಾಕಷ್ಟು ರೋಚಕತೆಯಿಂದ ಕೂಡಿರಲಿದೆ ಎಂದು ತಿಳಿಸಿದರು. ಅಂತರರಾಷ್ಟ್ರೀಯ ರ್ಯಾಲಿ ಪಟು ಜಗತ್ ನಂಜಪ್ಪ ಟ್ರ್ಯಾಕ್‍ನ್ನು ವಿನ್ಯಾಸಗೊಳಿಸಿದ್ದು, ಅಮ್ಮತ್ತಿ ರ್ಯಾಲಿ ಕ್ರಾಸ್ ಮುಕ್ತ ಸ್ಪರ್ಧೆಯಾಗಿದೆ ಎಂದರು. 800ಸಿಸಿ, 1400 ಸಿಸಿ, 1600 ಸಿಸಿ, ಕೂರ್ಗ್ ಓಪನ್, ಇಂಡಿಯನ್ ಓಪನ್, ರೋಲ್ ಕೇಜ್ ಕ್ಲಾಸ್, ಅನ್‍ರಿಸ್ಟ್ರಿಕ್ಟೆಡ್ ಕ್ಲಾಸ್, ಜಿಪ್ಸಿ ಓಪನ್ ಕ್ಲಾಸ್, ಜೀಪ್ ಓಪನ್ ಕ್ಲಾಸ್ ಮತ್ತು ಎಸ್‍ಯುವಿ ವಿಭಾಗಗಳಲ್ಲಿ ನಡೆಯಲಿದೆ. ಜೀಪ್ ಮತ್ತು ಕಾರ್‍ಗಳಿಗೆ ಸೀಮಿತವಾಗಿ ನಡೆಯುವ ರ್ಯಾಲಿಯಲ್ಲಿ ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ವಿವಿಧೆಡೆಗಳ ಖ್ಯಾತ ರ್ಯಾಲಿಪಟುಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಚೇತನ್ ಚಂಗಪ್ಪ ಹಾಗೂ ಯು.ಬಿ. ತಿಮ್ಮು ತಿಳಿಸಿದರು.

ಅಮ್ಮತ್ತಿ ರ್ಯಾಲಿ ಕ್ರಾಸ್‍ಗೆ ಸಂಬಂಧಿಸಿದಂತೆ ಮೊ. 9741889951, 9901312776ನ್ನು ಸಂಪರ್ಕಿಸ ಬಹುದಾಗಿದೆ.