ಮಡಿಕೇರಿ, ಏ. 1: ಈ ಚಿತ್ರವನ್ನೊಮ್ಮೆ ಗಮನಿಸಿ..., ನಡು ರಸ್ತೆಯಲ್ಲಿ ಕುರಿಯೊಂದು ತನ್ನ ಕರುಳ ಕುಡಿಗೆ ಹಾಲುಣಿಸುತ್ತಿದೆ. ಇತ್ತ ನಾಯಿಯೊಂದು ತನ್ನ ಪುಟಾಣಿ ಮರಿಗೆ ಹಾಲುಣಿಸುತ್ತಿದೆ., ತಾಯಿ ಕುರಿ ನಾಯಿ ಮರಿಗಳನ್ನು ದಿಟ್ಟಿಸಿ ನೋಡುತ್ತಿದೆ. ಪುಟಾಣಿ ನಾಯಿ ಮರಿಗಳೆರಡು ಕುರಿಗಳನ್ನು ಗಾಬರಿಯಿಂದ ನೋಡುತ್ತಿವೆ. ಎರಡೂ ಕಡೆಗಳಲ್ಲೂ ಆತಂಕ, ದುಗುಡ, ಭಯ ಮನೆ ಮಾಡಿದೆ.

ಎಲ್ಲಿ ನಾಯಿ ತನ್ನ ಮರಿಯ ಮೇಲೆ ಧಾಳಿ ಮಾಡುತ್ತದೋ ಎಂಬ ಭಯ ಕುರಿಯಲ್ಲಿ..., ನಮಗಿಂತ ದೊಡ್ಡದಿರುವ ಈ ಪ್ರಾಣಿ ಯಾವುದಪ್ಪಾ..., ನಮ್ಮನ್ನು ತಿಂದು ಬಿಡಬಹುದೇ ಎಂಬ ಆತಂಕ, ಭಯ ಪುಟಾಣಿ ನಾಯಿ ಮರಿಗಳಲ್ಲಿ...!

ಇಲ್ಲಿ ನಾಯಿಯಾಗಲೀ..., ಕುರಿ ಗಳಾಗಲಿ ಯಾರೂ ಮಿಸುಕಾಡಿದರೂ ಭಯದಿಂದ ಎಲ್ಲವೂ ಅಡ್ಡಾದಿಡ್ಡಿ ಓಡುವ ಸಂಭವವಿದೆ. ಅಕಸ್ಮಾತ್ ವಾಹನವೇನಾದರೂ ವೇಗವಾಗಿ ಬಂತೆಂದರೆ ಪ್ರಾಣಿಗಳ ಮೇಲೆ ಹರಿಯುವದಂತೂ ಖಂಡಿತಾ...!

ಅಪಾಯವನ್ನರಿತು ನಾಯಿ ಮರಿಗಳನ್ನು ಒಂದು ಬದಿಗೆ, ಕುರಿಗಳನ್ನು ಮತ್ತೊಂದು ಬದಿಗೆ ಸರಿಸುವ ಕಾರ್ಯ ನನ್ನದಾಯಿತು.

ಮನೆಗಳಲ್ಲಿ ಸಾಕಬೇಕಾದ ಪ್ರಾಣಿಗಳನ್ನು ಈ ರೀತಿ ರಸ್ತೆಗೆ ಬಿಡುವದು ಸರಿಯೇ? ಅಕಸ್ಮಾತ್ ವಾಹನಗಳು ಡಿಕ್ಕಿಯಾದರೆ ಅವುಗಳ ಜೀವವೇ ಹಾರಿಹೋಗುತ್ತದೆ. ಇಲ್ಲವೇ ಕೈಕಾಲುಗಳನ್ನು ಕಳೆದುಕೊಳ್ಳ ಬೇಕಾಗುತ್ತದೆ. ಜತೆಗೆ ವಾಹನ ಚಲಾಯಿಸುವವರೊಂದಿಗೆ ಘರ್ಷಣೆ, ಮೊಕದ್ದಮೆ ಇತ್ಯಾದಿ...!

ಇವೆಲ್ಲ ಬೇಕಾ...? ಮಡಿಕೇರಿಯ ಗಣಪತಿ ಬೀದಿ, ಎ.ವಿ. ಶಾಲೆ ಬಳಿ, ಆಜಾದ್‍ನಗರ, ತ್ಯಾಗರಾಜನಗರ ಕಾಲೋನಿಗಳಲ್ಲಿ ಯಥೇಚ್ಚವಾಗಿ ಕುರಿ, ನಾಯಿಗಳು ರಸ್ತೆಯಲ್ಲೇ ಇರುತ್ತದೆ. ಮೂಕ ಪ್ರಾಣಿಗಳು ಅನ್ಯಾಯವಾಗಿ ಸಾಯುವದನ್ನು ತಡೆಯಿರಿ..., ನಗರಸಭೆ ಕೂಡ ಈ ನಿಟ್ಟಿನಲ್ಲಿ ಗಮನಹರಿಸುವದು ಸೂಕ್ತ...!

- ಸಂತೋಷ್