ಕರಿಕೆ, ಏ. 1: ಪ್ರಸ್ತುತ ಸಾಲಿನಲ್ಲಿ ಮಳೆಯಾಗದ ಹಿನ್ನೆಲೆಯಲ್ಲಿ ಕರಿಕೆ ವ್ಯಾಪ್ತಿಯ ಗೇರು ಬೆಳೆ ಬೆಳೆಯುವ ರೈತರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ.

ಬಿಸಿಲಿನ ತಾಪ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಗೇರು ಬೆಳೆಯುವ ರೈತರು ಬಿಸಿಲಿನ ಬೇಗೆಯಿಂದ ತಮ್ಮ ಫಸಲನ್ನು ಕಳೆದುಕೊಂಡು ತೀವ್ರ ತೊಂದರೆಗೆ ಸಿಲುಕಿದ್ದಾರೆ. ಪ್ರತೀ ವರ್ಷ ಈ ಸಂದರ್ಭದಲ್ಲಿ 2-3 ಬಾರಿ ಮಳೆಯಾಗಿ ಗೇರು ಬೆಳೆ ಸಮೃದ್ಧವಾಗಿರುತ್ತಿತ್ತು. ವಾರ್ಷಿಕ ಸುಮಾರು 800-1000 ಟನ್ ಗೇರು ಬೀಜವನ್ನು ಈ ವ್ಯಾಪ್ತಿಯಲ್ಲಿ ಬೆಳೆಯಲಾಗುತ್ತಿತ್ತು. ಆದರೆ ಈ ಬಾರಿ ಸುಮಾರು 200 ರಿಂದ 300 ಟನ್ ಕುಸಿತವಾಗಿದೆ. ನವೆಂಬರ್ -ಡಿಸೆಂಬರ್‍ನಲ್ಲಿ ಹೂ ಬಿಡುವ ಗೇರು ಮರವು ಜನವರಿ ಅಂತ್ಯದಲ್ಲಿ ಅರಳಲು ಆರಂಭಿಸಿ ಕಾಯಿ ಕಟ್ಟುತ್ತದೆ. ಈ ಅವಧಿಯಲ್ಲಿ ಮಳೆ ಬಂದರೆ ಹೂ ಅರಳಲು ಸಹಕಾರಿಯಾಗುತ್ತದೆ. ಇದರಿಂದ ಉತ್ತಮ ಫಸಲು ದೊರೆಯುತ್ತದೆ. ಆದರೆ ಈ ಬಾರಿ ಕೆಲ ದಿನಗಳ ಹಿಂದೆ ತುಂತುರು ಮಳೆಯಾಗಿದ್ದು ಬಿಟ್ಟರೆ ಇತ್ತÀ ಮಳೆ ಸುಳಿದಿಲ್ಲ. ಹೂಗಳು ಕಜಕಲಾಗಿವೆ.

ಕರಿಕೆ ವ್ಯಾಪ್ತಿಯಲ್ಲಿ ಮಾತ್ರ ಸಂಕಷ್ಟ ಎದುರಾಗದೆ ಇಲ್ಲಿಗೆ ಸಮೀಪ ಚೆಂಬು, ಪೆರಾಜೆ ಹಾಗೂ ಸಂಪಾಜೆ ವ್ಯಾಪ್ತಿಯಲ್ಲಿ ಗೇರು ಬೆಳೆಯನ್ನು ವಾರ್ಷಿಕ ಬೆಳೆಯಾಗಿ ಬೆಳೆಯಲಾಗುತ್ತದೆ. ಇಲ್ಲಿಯೂ ಗೇರು ಬೆಳೆ ಕುಸಿತವುಂಟಾಗಿದೆ. ಸರ್ಕಾರ ಇತ್ತ ಗಮನಹರಿಸಿ ಪರಿಹಾರ ಕಲ್ಪಿಸಲು ಕಾರ್ಯ ಪ್ರವೃತ್ತರಾಗುವಂತೆ ಈ ಭಾಗದ ರೈತರು ಆಗ್ರಹಿಸಿದ್ದಾರೆ.

- ಸುಧೀರ್