ಮರಗೋಡು, ಏ. 1: ಯುಗಾದಿ ಹಬ್ಬದ ಪ್ರಯುಕ್ತ ಆಟೋಟ ಸ್ಪರ್ಧೆ ಮರಗೋಡುವಿನ ಕಾನಡ್ಕ ಕುಟುಂಬದ ಐನ್‍ಮನೆಯಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಹಿರಿಯರಾದ ಕಾನಡ್ಕ ರಾಮಯ್ಯ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಕಂಜನ ಗಣಪತಿ ಆಗಮಿಸಿದ್ದರು. ವೇದಿಕೆಯಲ್ಲಿ ಕಾನಡ್ಕ ದಾಮೋದರ, ಕಾನಡ್ಕ ಆನಂದ ಉಪಸ್ಥಿತರಿದ್ದರು.

ಕಾನಡ್ಕ ಭವಾನಿ, ನೈನ, ತಾರ ಪ್ರಾರ್ಥಿಸಿದರೆ, ಕಾನಡ್ಕ ಬಸಪ್ಪ ಸ್ವಾಗತಿಸಿ, ಕಾನಡ್ಕ ಹನೀಶ್ ನಿರೂಪಿಸಿ, ವಂದಿಸಿದರು. ನಂತರ 22 ಬಗೆಯ ಗ್ರಾಮೀಣ ಆಟೋಟ ಸ್ಪರ್ಧೆಗಳು ಎಲ್ಲಾ ವಯೋಮಾನದವರಿಗೂ ನಡೆದವು. ಆಟೋಟ ಸ್ಪರ್ಧೆಯಲ್ಲಿ ಕುಟುಂಬದ ಸದಸ್ಯರುಗಳು ಹಾಗೂ ಗ್ರಾಮಸ್ಥರು ನೂರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಸಮಾರೋಪ

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಕರ್ನಾಟಕ ಅರೆಭಾಷೆ ಸಂಸ್ಕøತಿ ಹಾಗೂ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಕೊಲ್ಯದ ಗಿರೀಶ್ ಆಗಮಿಸಿದ್ದರು. ಕುಟುಂಬ ಹಾಗೂ ಜನಾಂಗದ ಒಳಗೆ ಶಾಂತಿ, ಒಗ್ಗಟ್ಟು ಹಾಗೂ ಸಹಬಾಳ್ವೆ ಮುಂದುವರಿಯಲು, ನಮ್ಮ ಸಂಸ್ಕøತಿಯ ಜೊತೆಗೆ ಇಂತಹ ಆಟೋಟ ಸ್ಪರ್ಧೆಗಳನ್ನು ನಡೆಸುವದು ಪ್ರಯೋಜನಕಾರಿ ಎಂದರು.

ಇನ್ನೋರ್ವ ಮುಖ್ಯ ಅತಿಥಿಗಳಾಗಿ ಕೊಡಗು ಗೌಡ ವಿದ್ಯಾಸಂಘದ ಅಧ್ಯಕ್ಷ ಹೊಸೂರು ರಮೇಶ್ ಜೋಯಪ್ಪ ಮಾತನಾಡಿ, ಗೌಡ ಜನಾಂಗದವರು ತಮ್ಮ ಮಕ್ಕಳಿಗೆ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ವಿದ್ಯಾ ಸಂಘದಿಂದ ಜನಾಂಗದ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಹೆಚ್ಚಿನ ಸೌಲಭ್ಯಗಳನ್ನು ನೀಡಲಾಗುವದು ಎಂದು ಹೇಳಿದರು.

ವೇದಿಕೆಯಲ್ಲಿ ತಾಲೂಕು ಎ.ಪಿ.ಎಂ.ಸಿ. ಅಧ್ಯಕ್ಷ ಕಾಂಗೀರ ಸತೀಶ್, ಮರಗೋಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಾಳೆಕಜೆ ಯೋಗೇಂದ್ರ, ಅರೆಭಾಷೆ ಅಕಾಡೆಮಿ ಸದಸ್ಯ ಮಂದ್ರೀರ ಮೋಹನ್ ದಾಸ್ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯರಾದ ಕಾನಡ್ಕ ರಾಮಯ್ಯ ವಹಿಸಿದ್ದರು.

ಇದೇ ಸಂದರ್ಭ ಕೊಲ್ಯದ ಗಿರೀಶ್, ಹೊಸೂರು ರಮೇಶ್ ಜೋಯಪ್ಪ, ಕಾಂಗೀರ ಸತೀಶ್, ಬಾಳೆಕಜೆ ಯೋಗೇಂದ್ರ, ಮಂದ್ರೀರ ಮೋಹನ್ ದಾಸ್ ಅವರನ್ನು ಸನ್ಮಾನಿಸಲಾಯಿತು. ಆಟೋಟ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಕಾನಡ್ಕ ತಿಲಕ್‍ರಾಜ್ ಸ್ವಾಗತಿಸಿದರೆ, ಕಾನಡ್ಕ ಹನೀಶ್ ನಿರೂಪಿಸಿ, ವಂದಿಸಿದರು.