ಮಡಿಕೇರಿ, ಏ. 1: ಮಡಿಕೇರಿ ನಗರ ವ್ಯಾಪ್ತಿಯಲ್ಲಿ ನಿಯಮ ಬಾಹಿರವಾಗಿ ಕೇಬಲ್ ಅಳವಡಿಸಿ ರುವದು ಒಳಚರಂಡಿ ಮೂಲಕ ಕೇಬಲ್ ಅಳವಡಿಸಿರುವದು ಹಾಗೂ ಮಾರುಕಟ್ಟೆ ಬಳಿ ಅಕ್ರಮವಾಗಿ ಬಹುಮಹಡಿ ಕಟ್ಟಡ ನಿರ್ಮಾಣ ವಾಗಿರುವದನ್ನು ಲೋಕಾಯುಕ್ತ ತನಿಖೆ ನಡೆಸಬೇಕು. ಎ.ಸಿ.ಬಿ. ಜಾರಿ ನಿರ್ದೇಶನಾಲಯದಿಂದ ಧಾಳಿ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ದೂರು ಸಲ್ಲಿಸಲಾಗಿದೆ.

ಮಡಿಕೇರಿ ನಗರಸಭಾ ವ್ಯಾಪ್ತಿಯಲ್ಲಿ 21 ಕಿ.ಮೀ. ನಷ್ಟು ಕೇಬಲ್ ಸಂಪರ್ಕ ಕಲ್ಪಿಸುವದಕ್ಕಾಗಿ ಈ ರಿಲಯನ್ಸ್ ಕಂಪೆನಿಗೆ ಅಂಡರ್ ಗ್ರೌಂಡ್ ಕೇಬಲ್ ಅಳವಡಿಸಲು 2016ರಲ್ಲಿ ನಗರಸಭೆಗೆ 2 ಕೋಟಿ 10 ಲಕ್ಷ ಬಾಡಿಗೆ ಸಂದಾಯ ಮಾಡುವ ಒಪ್ಪಂದವಾಗಿತ್ತು. ಆದರೆ ಕೆಲವು ಸಿ.ಎಂ.ಸಿ. ಸದಸ್ಯರು ಕಮಿಷನ್ ಆಸೆಗೆ ಕೇವಲ 50 ಲಕ್ಷ ಹಣವನ್ನು ರಿಲಯನ್ಸ್ ಕಂಪೆನಿಯಿಂದ ಕಟ್ಟಿಸಿಕೊಂಡು ರಿಲಯನ್ಸ್ ಸಂಸ್ಥೆಗೆ ಸುಮಾರು 1 ಕೋಟಿ 60 ಲಕ್ಷ ನಿವ್ವಳ ಲಾಭ ಕೊಡಿಸಿದ್ದು, ಅದರಲ್ಲಿ ಸುಮಾರು ರೂ. 30 ಲಕ್ಷದಷ್ಟು ಹಣವನ್ನು ಕಮಿಷನ್ ಆಗಿ ಸದಸ್ಯರು ಪಡೆದುಕೊಂಡಿದ್ದಾರೆ. ಹೀಗಾಗಿ ಸಿ.ಎಂ.ಸಿ ಗೆ ಬರಬೇಕಾಗಿದ್ದ ರೂ. 2 ಕೋಟಿ 10 ಲಕ್ಷದಲ್ಲಿ ಕೇವಲ ರೂ. 50 ಲಕ್ಷ ಬಂದಿದ್ದು, ಹಗಲು ದರೋಡೆಯಲ್ಲಿ 6 ಮಂದಿ ಸದಸ್ಯರು ಭಾಗಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಒಳಚರಂಡಿ ಮಂಡಳಿಯಿಂದ ಮಡಿಕೇರಿ ನಗರದಲ್ಲಿ 124 ಕಿ.ಮೀ.ನಷ್ಟು ಒಳಚರಂಡಿ ಕಾರ್ಯ ಯೋಜನೆ ರೂಪಿಸಿದ್ದು, ಈಗಾಗಲೇ 50 ಕಿ.ಮೀ. ವರ್ಕ್ (ಕೆಲಸ) ಮುಗಿದಿದೆ. ಮಡಿಕೇರಿಯ ಕೇಬಲ್ ಸಂಸ್ಥೆಯೊಂದು ನಗರಸಭೆಯ ಯಾವದೇ ಅನುಮತಿ ರಹದಾರಿ ಪತ್ರ ಇಲ್ಲದೇ ತಮ್ಮ ಕಂಪೆನಿಯ ಕೇಬಲ್ ಅಳವಡಿಸಿರುತ್ತಾರೆ. ಈಗಾಗಲೇ 50 ಕಿ.ಮೀ. ಕೇಬಲ್‍ನ್ನು ಅಳವಡಿಸಿ ಯಾಗಿದೆ. ಯು.ಜಿ.ಡಿ.ಯಲ್ಲಿ ಕೇಬಲ್ ಅಳವಡಿಸುವ ಯಾವದೇ ಕಾರ್ಯ ಯೋಜನೆ ನಗರಸಭೆಯಲ್ಲಿಲ್ಲ. ನಿಯಮವನ್ನು ಗಾಳಿಗೆ ತೂರಿ ಅಕ್ರಮವಾಗಿ ಕೇಬಲ್ ಅಳವಡಿಸ ಲಾಗಿದ್ದು, ಹತ್ತಾರು ಕೋಟಿ ರೂ. ಆದಾಯ ನಗರಸಭೆಗೆ ಬರಬೇಕಾಗಿದ್ದು, ಕೆಲವು ದಲ್ಲಾಳಿ ಸದಸ್ಯರ ಕಮಿಷನ್ ಆಸೆಗಾಗಿ ನಷ್ಟ ಉಂಟಾಗಿದೆ ಎಂದು ತಿಳಿಸಲಾಗಿದೆ.

ಮಾರುಕಟ್ಟೆ ಬಳಿ ಅಕ್ರಮವಾಗಿ 7 ಅಂತಸ್ತಿನ ಕಟ್ಟಡ ನಿರ್ಮಿಸಲಾಗಿದೆ. ಈ ಕಾಮಗಾರಿಯಲ್ಲೂ ಕೂಡ 6 ಮಂದಿ ಸದಸ್ಯರುಗಳು ರೂ. 50 ಲಕ್ಷ ಕಮಿಷನ್ ಪಡೆದುಕೊಂಡಿದ್ದು, ಈ ಮೂರು ಅವ್ಯವಹಾರಗಳ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯನಾಯ್ಡು, ರಾಜ್ಯ ಯೋಜನಾ ಮಂತ್ರಿ ಎಂ.ಆರ್. ಸೀತಾರಾಂ, ನಗರಾಭಿವೃದ್ಧಿ ಸಚಿವ ರೋಶನ್‍ಬೇಗ್ ಹಾಗೂ ರಿಸರ್ವ್ ಬ್ಯಾಂಕ್‍ನ ಜಾರಿ ನಿರ್ದೇಶನಾಲಯಕ್ಕೆ ದೂರು ಸಲ್ಲಿಸಲಾಗಿದೆ.