ಮಡಿಕೇರಿ, ಏ. 1: ಕಾಂಗ್ರೆಸ್ ಪಕ್ಷದಲ್ಲಿನ ರಾಜೀನಾಮೆ ಪರ್ವದ ವಿಚಾರಕ್ಕೆ ಸಂಬಂಧಿಸಿದಂತೆ ಜಿಲ್ಲಾ ಕಾಂಗ್ರೆಸ್ ಪ್ರಬಾರ ಅಧ್ಯಕ್ಷರಾಗಿರುವ ಟಿ.ಪಿ. ರಮೇಶ್ ಅವರು ಸ್ಪಷ್ಟೀಕರಣ ನೀಡಿದ್ದಾರೆ.

ಮಂಜುನಾಥ್‍ಕುಮಾರ್ ವಕ್ತಾರರಾಗಿ ಮಾಡುವ ಕೆಲಸವನ್ನು ಅವರಾಗಿ ಬಿಟ್ಟಿದ್ದು, ಜಿಲ್ಲಾ ಕಾಂಗ್ರೆಸ್ಸಿನ ಪ್ರಧಾನ ಕಾರ್ಯದರ್ಶಿಯಾಗಿ ಮುಂದುವರಿಯುತ್ತಿದ್ದಾರೆ.

ಕೆ.ಎಂ. ಲೋಕೇಶ್ ಅಮಾನತು ಗೊಂಡಿರುವದನ್ನು ಕೆ.ಪಿ.ಸಿ.ಸಿ. ಹಿಂಪಡೆಯಬೇಕೆಂದು ಕೋರಿ ಡಿಸಿಸಿಯಿಂದ ಪತ್ರ ಬರೆಯಲಾಗಿದೆ.

ಹಿಂದಿನ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ ವಿಸರ್ಜಿಸಲಾಗಿದ್ದು, ನೂತನ ಅಧ್ಯಕ್ಷೆ ಪುಷ್ಪಲತಾ ಅವರು ಇನ್ನಷ್ಟು ಸಮಿತಿಗಳನ್ನು ರಚಿಸಬೇಕಾಗಿದೆ. ಮಹಿಳಾ ಕಾಂಗ್ರೆಸ್ ನಗರ ಸಮಿತಿ ಅಸ್ತಿತ್ವದಲ್ಲಿಲ್ಲ. ಹಾಗಾಗಿ ಲೀಲಾ ಶೇಷಮ್ಮ ರಾಜೀನಾಮೆ ನೀಡುವ ವಿಚಾರವೇ ಪ್ರಸ್ತುತದಲ್ಲಿಲ್ಲ ವೆಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವಿ.ಪಿ. ಸುರೇಶ್ ರಾಜೀನಾಮೆ ನೀಡಿಲ್ಲ. ಅವರೇ ಇಂದಿಗೂ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಯಾಗಿ ಕಾರ್ಯನಿರ್ವಹಿಸಿಕೊಂಡು ಬರುತ್ತಿದ್ದಾರೆ. ಸಹಕಾರಿ ನೇಮಕಾತಿ ಯಲ್ಲಿ ಅವರಿಗಾದ ಅನ್ಯಾಯದ ಬಗ್ಗೆ ವರಿಷ್ಠರ ಗಮನಕ್ಕೆ ತರಲಾಗಿದೆ.

ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ವಲಯ, ಬ್ಲಾಕ್ ಹಾಗೂ ಜಿಲ್ಲಾ ಕಾಂಗ್ರೆಸ್ ಸಮಿತಿಗಳಿಗೆ ಪಕ್ಷದ ವತಿಯಿಂದ ಚುನಾವಣೆಗಳು ನಡೆಯಲಿದ್ದು, ಕೆ.ಪಿ.ಸಿ.ಸಿ. ಜಿಲ್ಲಾ ಚುನಾವಣಾಧಿಕಾರಿಗಳನ್ನು, ಬ್ಲಾಕ್ ಚುನಾವಣಾಧಿಕಾರಿಗಳನ್ನು ಸದ್ಯದಲ್ಲೇ ನೇಮಿಸುವ ಸಂಭವವಿದೆಯೆಂದು ಅವರು ತಿಳಿಸಿದ್ದಾರೆ.