ಶನಿವಾರಸಂತೆ, ಏ. 1: ಶನಿವಾರಸಂತೆ ಗ್ರಾಮ ಪಂಚಾಯಿತಿಯ ವಿವಿಧ ಮಳಿಗೆ-ನೀರಿನ ಘಟಕ ಉದ್ಘಾಟನಾ ಸಮಾರಂಭ ಸಂತೆ ಮಾರುಕಟ್ಟೆ ಆವರಣದಲ್ಲಿ ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ಗ್ರಾ.ಪಂ. ಅಧ್ಯಕ್ಷ ಮಹಮ್ಮದ್ ಗೌಸ್ ವಹಿಸಿದ್ದರು.

ಸಂತೆ ಮಾರುಕಟ್ಟೆಯಲ್ಲಿ ಸುಮಾರು ರೂ. 14 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ವಾಣಿಜ್ಯ ಮಳಿಗೆಗಳು ಹಾಗೂ ರೂ. 50 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಶುದ್ಧ ಕುಡಿಯುವ ನೀರಿನ ಘಟಕದ ಉದ್ಘಾಟನೆಯನ್ನು ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಉದ್ಘಾಟಿಸಿದರು.

ಬಳಿಕ ಮಾತನಾಡಿ, ಶನಿವಾರಸಂತೆ ಹಾಗೂ ದುಂಡಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ ಮುಕ್ತಿದಾಮದ ಅಭಿವೃದ್ಧಿಗೆ ರೂ. 10 ಲಕ್ಷ ಅನುದಾನ ಕೊಡಿಸುವದಾಗಿ ಭರವಸೆ ನೀಡಿದರು. ಕಸ ವಿಲೇವಾರಿಗೆ ಎಲ್ಲಾ ಪಂಚಾಯಿತಿಗಳಿಗೂ ರೂ. 20 ಲಕ್ಷ ಇಡಲಾಗಿದೆ. ಶನಿವಾರಸಂತೆ ಹಾಗೂ ದುಂಡಳ್ಳಿ ಪಂಚಾಯಿತಿಯವರು ಒಟ್ಟಾಗಿ ಸೇರಿ ಜಾಗ ಗುರುತಿಸಿ ಕಸ ವಿಲೇವಾರಿ ಘಟಕ ಸ್ಥಾಪಿಸಿ ಸಮಸ್ಯೆ ಬಗೆಹರಿಸಿಕೊಳ್ಳಬಹುದು ಎಂದರು.

ತಾ.ಪಂ. ಸದಸ್ಯ ಬಿ.ಎಸ್. ಅನಂತ್ ಕುಮಾರ್ ಮಾತನಾಡಿ, ಶನಿವಾರಸಂತೆ ಅಭಿವೃದ್ಧಿ ಹೊಂದಲು ಮೂಲಭೂತ ಸಮಸ್ಯೆಗಳು ಕಾಡುತ್ತಿದೆ. ಶಾಸಕರ ಪ್ರಯತ್ನದಿಂದ ಸಮಸ್ಯೆಗಳನ್ನು ಬಗೆಹರಿಸಬಹುದು ಎಂದರು. ಜಿ.ಪಂ. ಸದಸ್ಯ ಪುಟ್ಟರಾಜು ಅವರು 1ನೇ ವಿಭಾಗದ ಇಇಇ ಇಂಡಿಯಾ ಸಂಸ್ಥೆಯಿಂದ ನಿರ್ಮಿಸಲಾದ ಶುದ್ಧ ನೀರಿನ ಘಟಕದ ಉದ್ಘಾಟನೆಯನ್ನು ನೆರವೇರಿಸಿದರು.

ಸಮಾರಂಭದಲ್ಲಿ ತಾ.ಪಂ. ಸದಸ್ಯ ಕುಶಾಲಪ್ಪ, ಆರ್.ಎಂ.ಸಿ. ಸದಸ್ಯೆ ಶಿವಮಣಿ, ಪಂಚಾಯಿತಿ ಉಪಾಧ್ಯಕ್ಷೆ ಗೀತಾ ಹರೀಶ್, ಪಂಚಾಯಿತಿ ಮಾಜಿ ಅಧ್ಯಕ್ಷೆ ಭುವನೇಶ್ವರಿ, ತಾ.ಪಂ. ಮಾಜಿ ಅಧ್ಯಕ್ಷ ಬಿ.ಕೆ. ಚಂದ್ರು, ತಾ.ಪಂ. ಮಾಜಿ ಸದಸ್ಯ ಚಂದ್ರೇಗೌಡ, ಪಂಚಾಯಿತಿ ಸದಸ್ಯರುಗಳಾದ ಸೌಭಾಗ್ಯಲಕ್ಷ್ಮಿ, ರಜನಿ, ಉಷಾ, ಹೇಮಾವತಿ, ಸರ್ದಾರ್ ಅಹಮ್ಮದ್, ಎಸ್.ಎ. ಆದಿತ್ಯ, ಪಾಂಡು, ಹರಿಶ್, ಸಾರ್ವಜನಿಕರು ಉಪಸ್ಥಿತರಿದ್ದರು. ಹರೀಶ್ ಸ್ವಾಗತಿಸಿ, ಶಿಕ್ಷಕ ಜಯಕುಮಾರ್ ವಂದಿಸಿದರು.