ಸಿದ್ದಾಪುರ, ಏ. 1: ಮಕ್ಕಳು ಸಣ್ಣ ಪ್ರಾಯದಿಂದ ಕತೆ, ಕವನಗಳನ್ನು ರಚಿಸುವ ಮೂಲಕ ಸಾಹಿತ್ಯವನ್ನು ಮೈಗೂಡಿಸಬೇಕೆಂದು ಪತ್ರಕರ್ತ ಹಾಗೂ ವಾಲ್ನೂರು ಗ್ರಾ.ಪಂ. ಸದಸ್ಯ ಅಂಚೆಮನೆ ಸುಧಿಕುಮಾರ್ ಕರೆ ನೀಡಿದರು.

ವಾಲ್ನೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಡಾ. ನಾ. ಡಿಸೋಜ ಮಕ್ಕಳ ಸಾಹಿತ್ಯ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಸ್ಥಳದಲ್ಲೇ ಕತೆ ಬರೆಯುವ ಸ್ಪರ್ಧೆಯ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಸಿದ್ದಾಪುರ ಗ್ರಾ.ಪಂ. ಸದಸ್ಯ ಹಾಗೂ ಪತ್ರಕರ್ತ ರೆಜಿತ್ ಕುಮಾರ್ ಗುಹ್ಯ ಮಾತನಾಡಿ, ಇತ್ತೀಚೆಗಿನ ದಿನಗಳಲ್ಲಿ ಮಕ್ಕಳಲ್ಲಿ ಕತೆಗಳನ್ನು ಬರೆಯುವ ತಾಳ್ಮೆ ಕಡಿಮೆಯಾಗುತ್ತಿದ್ದು, ಬರೆಯುವ ಸ್ಪರ್ಧೆ ಕೈಗೊಂಡಿರುವದು ಶ್ಲಾಘನೀಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಕ.ಸಾ.ಪ. ಅಧ್ಯಕ್ಷ ಲೋಕೇಶ್ ಸಾಗರ್, ಕನ್ನಡ ಭಾಷೆ ಹಾಗೂ ಸಾಹಿತ್ಯವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಮಕ್ಕಳಿಗೆ ಕತೆ ಬರೆಯುವ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಇಂಚನ, ದ್ವಿತೀಯ ಬಹುಮಾನ ಸಫಾನ ಹಾಗೂ ತೃತೀಯ ಬಹುಮಾನವನ್ನು ಭೂಮಿಕ ಪಡೆದುಕೊಂಡರು. ಕ.ಸಾ.ಪ. ಜಿಲ್ಲಾ ಮಟ್ಟದ ಸ್ಪರ್ಧೆಗಳ ಸಮಿತಿ ಸಂಚಾಲಕ ಹೆಚ್.ಹೆಚ್ ಸುಂದರ್, ವಾಲ್ನೂರು ಸರಕಾರಿ ಶಾಲೆಯ ಮುಖ್ಯೋಪಾ ಧ್ಯಾಯ ಕುಮಾರ್, ಶಿಕ್ಷಕಿ ಆಶಾಮಣಿ, ಚೇತನ್ ಕುಮಾರ್, ಜಯಲಕ್ಷ್ಮಿ, ಶೋಭ, ಸರೋಜ, ಗಂಗಮ್ಮ, ಸುರೇಶ, ಶಾಲಾ ವಿದ್ಯಾರ್ಥಿಗಳು ಇದ್ದರು.