ನಾಪೋಕ್ಲು, ಏ. 1: ಜೀವನ ರೂಪಿಸಲು ವಿದ್ಯೆ ಮುಖ್ಯ. ಯಾವ ರೀತಿಯ ವಿದ್ಯಾಭ್ಯಾಸ ನೀಡಬೇಕು ಎಂಬುದನ್ನು ತಂದೆ ತಾಯಿಗಳು ಚಿಂತನೆ ನಡೆಸಿ ಮಕ್ಕಳಿಗೆ ಯೋಗ್ಯ ವಿದ್ಯಾಭ್ಯಾಸವನ್ನು ನೀಡುವ ಜವಾಬ್ದಾರಿಯನ್ನು ಪೋಷಕರು ಹೊಂದಿರಬೇಕು ಎಂದು ನಿವೃತ್ತ ಅಧ್ಯಾಪಕ ಕೋಟೇರ ಸುರೇಶ್ ಚೆಂಗಪ್ಪ ಹೇಳಿದರು. ಇಲ್ಲಿನ ಕೊಡವ ಸಮಾಜದಲ್ಲಿ ಬೇತು ಗ್ರಾಮದ ಎಕ್ಸೆಲ್ ವಿದ್ಯಾಸಂಸ್ಥೆಯ ವತಿಯಿಂದ ಶುಕ್ರವಾರ ನಡೆದ ಶೈಕ್ಷಣಿಕ ವರ್ಷದ ಮುಕ್ತಾಯ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಹಿಂದೆ ವಿದ್ಯೆ ಇಲ್ಲದಿದ್ದರೂ ಬುದ್ಧಿಯಿಂದ ಬದುಕು ಸಾಗಿಸುತ್ತಿದ್ದರು. ಹಿಂದಿಗಿಂತಲೂ ಇಂದು ವಿದ್ಯೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕಾದ ಪರಿಸ್ಥಿತಿ ಇದೆ. ಹೊರಗಿನ ಪ್ರಪಂಚ ತಿಳಿಯಬೇಕಾದರೆ ಇಂಗ್ಲಿಷ್ ಭಾಷೆ ಮುಖ್ಯ. ಈಗಿನ ಮಕ್ಕಳ ಪ್ರತಿಭೆಗೆ ಅನುಗುಣವಾಗಿ ಶಿಕ್ಷಣ ನೀಡಬೇಕಾಗಿದ್ದು ಮಕ್ಕಳ ಪ್ರತಿಭೆಯನ್ನು ಹೊರಹೊಮ್ಮಿಸಲು ಶಿಕ್ಷಕರು ನಿರಂತರ ಸಹಾಯ ಮಾಡಬೇಕಾಗಿದೆ. ಪೋಷಕರು ಶಿಕ್ಷಕರು ಹಾಗೂ ಆಡಳಿತ ಮಂಡಳಿಗಳ ನಡುವೆ ಸೌಹಾರ್ದ ಸಂಬಂಧವಿದ್ದಲ್ಲಿ ಶೈಕ್ಷಣಿಕ ಏಳಿಗೆ ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು. ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ನಿವೃತ್ತ ಪ್ರಾಂಶುಪಾಲೆ ಪ್ರೊ. ಸುಲೋಚನಾ ನಾರಾಯಣ ಮಾತನಾಡಿ, ಮಕ್ಕಳ ಲಾಲನೆ ಪಾಲನೆ ಮತ್ತು ಪೋಷಣೆಯ ಕುರಿತು ಸಂದರ್ಭೋಚಿತ ಮಾಹಿತಿ ನೀಡಿದರು.

ಮಕ್ಕಳನ್ನು ಸಮಾಜಮುಖಿ ಯಾಗಿ ರೂಪಿಸುವ ಜವಾಬ್ದಾರಿ ಪೋಷಕರದ್ದಾಗಿದ್ದು ವ್ಯಕ್ತಿ ನಿರ್ಮಾಣ ಕಾರ್ಯ ಸುಲಭದ ಕೆಲಸವಲ್ಲ ಮಕ್ಕಳು ಸಹಜ ಬದುಕಿನ ಸೌಂದರ್ಯ ಹೊಂದಲು ಹಾಗೂ ಸಮಾಜದ ಎಲ್ಲರನ್ನೂ ಪ್ರೀತಿಸುವಂತೆ ಮಾಡುವದು ಹೆತ್ತವರ ಮೊದಲ ಕರ್ತವ್ಯ ಎಂದು ಅಭಿಪ್ರಾಯಪಟ್ಟರು. ಎಕ್ಸೆಲ್ ಸ್ಕೂಲ್ ಆಫ್ ಎಜುಕೇಶನ್ ಸಂಸ್ಥೆಯ ಅಧ್ಯಕ್ಷ ಕುಟ್ಟಂಜೆಟ್ಟೀರ ಮಾದಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.ಶಿಕ್ಷಕಿ ರೆಹನಾ ಸ್ವಾಗತಿಸಿದರು.ಶರೀನಾ ವಂದಿಸಿದರು. ಬಳಿಕ ಶಾಲಾ ವಿದ್ಯಾರ್ಥಿಗಳಿಂದ ನಡೆದ ಸಾಂಸ್ಕøತಿಕ ಪ್ರದರ್ಶನ ಜನಮನ ರಂಜಿಸಿತು.ಮೂರ್ನಾಡಿನ ಚರಣ್ ಮತ್ತು ತಂಡದವರು ಪ್ರದರ್ಶಿಸಿದ ನೃತ್ಯಗಳು ವೀಕ್ಷಕರ ಮನಸೂರೆಗೊಂಡವು.