ಸೋಮವಾರಪೇಟೆ, ಏ. 1: ಪಟ್ಟಣದ ವೆಂಕಟೇಶ್ವರ ಬ್ಲಾಕ್‍ನ ಅಂಗನವಾಡಿ ಕೇಂದ್ರದಲ್ಲಿ ಪಟ್ಟಣ ವ್ಯಾಪ್ತಿಯ ಐದು ಅಂಗನವಾಡಿ ಕೇಂದ್ರದ ವಿದ್ಯಾರ್ಥಿಗಳ ಪೋಷಕರ ದಿನಾಚರಣೆ ನಡೆಯಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಪ.ಪಂ. ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್, ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಗಳನ್ನು ಹೊರತರಲು ಶಿಕ್ಷಕರು ಮತ್ತು ಪೋಷಕರು ಜವಾಬ್ದಾರಿ ವಹಿಸಬೇಕು ಎಂದರು.

ಇತ್ತೀಚಿನ ದಿನಗಳಲ್ಲಿ ಪುರುಷ ಸಮಾನವಾಗಿ ಮಹಿಳೆ ಸಾಧನೆ ಮಾಡುತ್ತಿರುವದು ವಿಶೇಷವಾಗಿದ್ದರೆ, ಇಂದು ದೊಡ್ಡವರು ಮಾಡಲಾಗದ ಸಾಧನೆಯನ್ನು ಮಕ್ಕಳು ಮಾಡುತ್ತಿರುವದು ಮತ್ತೊಂದು ವಿಶೇಷವಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪಟ್ಟಣ ಪಂಚಾಯಿತಿ ಸದಸ್ಯೆ ಮೀನಕುಮಾರಿ ವಹಿಸಿದ್ದರು. ವೇದಿಕೆಯಲ್ಲಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಾಚಪ್ಪ, ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ ನಳಿನಿ ಗಣೇಶ್, ಪಟ್ಟಣ ಪಂಚಾಯಿತಿ ಸದಸ್ಯರುಗಳಾದ ಸುಶೀಲಾ, ಸುಷ್ಮಾ, ಆರೋಗ್ಯ ನಿರೀಕ್ಷಕ ಉದಯಕುಮಾರ್, ಪ್ರಬಾರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಯಶೋಧಾ, ಮಹಿಳಾ ಮೇಲ್ವಿಚಾರಕಿ ವೈ.ಎಸ್. ಶೈಲಾ, ಜಿ.ಎಂ.ಪಿ. ಶಾಲೆಯ ಶಿಕ್ಷಕಿ ಕವಿತಾ, ಅಂಗನವಾಡಿ ಕಾರ್ಯಕರ್ತೆ ಜೆನಿಫರ್ ತಾರಾ ಲೋಬೋ ಉಪಸ್ಥಿತರಿದ್ದರು.

ಪಟ್ಟಣದ ವೆಂಕಟೇಶ್ವರ ಬ್ಲಾಕ್, ಜನತಾ ಕಾಲೋನಿ, ಮಹದೇಶ್ವರ ಬ್ಲಾಕ್, ಬಸವೇಶ್ವರರಸ್ತೆ ಹಾಗೂ ಪೌರಕಾರ್ಮಿಕರ ಕಾಲೋನಿಯ ಅಂಗನವಾಡಿ ಕೇಂದ್ರಗಳ ಮಕ್ಕಳಿಗೆ ಛಧ್ಮವೇಷ ಸ್ಪರ್ಧೆ ನಡೆಸಿ, ಬಹುಮಾನ ವಿತರಿಸಲಾಯಿತು.