ಸಿದ್ದಾಪುರ, ಏ. 1: ಮೂರು ತಿಂಗಳ ಹಿಂದೆ ಕಾಡಾನೆ ದಾಳಿಗೆ ಸಿಲುಕಿ ಮಹಿಳೆ ಮೃತಪಟ್ಟ ಘಟನೆ ಸಮೀಪದ ಕರಡಿಗೋಡು ಗ್ರಾಮದಲ್ಲಿ ನಡೆದಿದೆ.

ಕರಡಿಗೋಡು ಗ್ರಾಮದ ದಿವಂಗತ ಬಾಲನ್ ಎಂಬವರ ಪತ್ನಿ ಯಶೋದ (60) ಎಂಬವರು ಕರಡಿಗೋಡುವಿನ ಚಿಕ್ಕನಳ್ಳಿಯ ವಂಡಪ್ಪಾರ ಎಂಬ ಖಾಸಗಿ ಕಾಫಿ ತೋಟ ದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ಕಾಡಾನೆ ಯೊಂದು ಏಕಾಏಕಿ ದಾಳಿ ನಡೆಸಿ ಸೊಂಡಿಲಿ ನಿಂದ ಎಸೆದ ಪರಿಣಾಮ ಯಶೋದ ಅವರ ಸೊಂಟಕ್ಕೆ ಹಾಗೂ ಕಾಲಿಗೆ ತೀವ್ರ ಸ್ವರೂಪದ ಗಾಯವಾಗಿತ್ತು. ಚಿಂತಾಜನಕ ಸ್ಥಿತಿಯಲ್ಲಿ ಯಶೋದ ಅವರು ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೆ ಶನಿವಾರದಂದು ಸಾವನ್ನಪ್ಪಿದ್ದಾರೆ. ಕಾಡಾನೆ ಧಾಳಿ ನಡೆಸಿದ ಸಂದರ್ಭದಲ್ಲಿ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿದ್ದರು. ಇಂದು ಕೂಡ ವೀರಾಜಪೇಟೆ ಉಪ ವಲಯ ಅರಣ್ಯಾಧಿಕಾರಿ ದೇವಯ್ಯ ಸ್ಥಳಕ್ಕೆ ಭೇಟಿ ನೀಡಿದ್ದರು. ಮೃತ ಮಹಿಳೆ ಈರ್ವರು ಪುತ್ರರನ್ನು ಅಗಲಿದ್ದಾರೆ.

ಪರಿಹಾರಕ್ಕೆ ಆಗ್ರಹ

ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ಕಾಡಾನೆ ದಾಳಿಗೆ ಸಿಲುಕಿ ಮೃತಪಟ್ಟ ಬಡ ಕುಟುಂಬದ ಕಾರ್ಮಿಕ ಮಹಿಳೆ ಯಶೋದರವರ ಕುಟುಂಬಕ್ಕೆ ಅರಣ್ಯ ಇಲಾಖೆ ಕೂಡಲೇ ಪರಿಹಾರವನ್ನು ನೀಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.