ಮಡಿಕೇರಿ, ಏ. 1: ದಿನ ನಿತ್ಯದ ಕಾರ್ಯಚಟುವಟಿಕೆಯ ನಡುವೆ ಬಹುತೇಕರಿಗೆ ಒಂದೊಂದು ವಿಶೇಷ ದಿನಗಳ ಪÀರಿವೇ ಇರುವದು ಕಡಿಮೆ. ಪ್ರಮುಖವಾದ ದಿನ ಆಚರಣೆಗಳು, ರಜಾದಿನಗಳ ಬಗ್ಗೆ ಸಹಜವಾಗಿ ಅರಿವು ಇರುತ್ತದೆ. ಆದರೆ... ಏಪ್ರಿಲ್ 1ರ ಬಗ್ಗೆ ಎಲ್ಲರಿಗೆ ಗೊತ್ತಿದ್ದರೂ ಮರೆತು ಬಿಟ್ಟಿರುತ್ತಾರೆ. ಹೇಳಿ ಕೇಳಿ ಈ ದಿನಕ್ಕೆ ಮೂರ್ಖರ ದಿನ ಎಂದು ಹೆಸರು. ಸುಳ್ಳು ಮಾಹಿತಿ ತಮಾಷೆಗೆ ಇತರರನ್ನು ವಂಚಿಸಿ ಛೇಡಿಸುವದು ಈ ದಿನದ ವಿಶೇಷತೆ. ಈ ದಿನ ನೀವೂ ಏನಾದರೂ ಬೇಸ್ತು ಬಿದ್ದಿದ್ದೀರೇನು...?

ಜನರನ್ನು ಮೂರ್ಖರನ್ನಾಗಿಸಲು ಇಂತಹ ಹಲವು ಪ್ರಯತ್ನಗಳು ನಡೆದಿವೆ. ಸಾಮಾಜಿಕ ಜಾಲ ತಾಣದಲ್ಲಿ ಇಂತಹ ಹಲವಾರು ಚೇಷ್ಟೆಗಳು ಹರಿದಾಡಿವೆ. 2 ಸಾವಿರ ಮುಖಬೆಲೆಯ ನೋಟು ಚಲಾವಣೆ ರದ್ದುಗೊಳ್ಳಲಿದೆ. ಅಪಘಾತದಲ್ಲಿ ರಾಜ್ಯದ ಪ್ರಮುಖರೊಬ್ಬರು ಇನ್ನಿಲ್ಲವಾಗಿದ್ದಾರೆ, ಮಡಿಕೇರಿ ನಗರದಲ್ಲಿ ಎಸಿಬಿ ಧಾಳಿ ನಡೆದಿದೆ ಎಂದು ಹಾಗೂ ಗ್ಯಾಸ್ ದರ ರೂ. 300 ಕಡಿತ ಗೊಂಡಿದೆ ಎಂಬಿತ್ಯಾದಿ ಸುಳ್ಳು ಸಂದೇಶಗಳು. ಇದರ ಬೆನ್ನಲ್ಲೇ ಹೇ..., ಹೇ..., ಇಂದು ಏಪ್ರಿಲ್ 1 ಎಂಬ ಸ್ಪಷ್ಟನೆಯೂ ಕಂಡುಬಂದಿತು. ಇದಲ್ಲದೆ ಕೆಲವಾರು ತಮಾಷೆಯ ರೀತಿಯ ವೀಡಿಯೋ ಕ್ಲಿಪ್‍ಗಳು, ಜೋಕ್ಸ್ ಕೂಡ ಏಪ್ರಿಲ್ 1ರ ಸ್ಪೆಷಲ್ ಆಗಿತ್ತು. ಪೆಟ್ರೋಲ್..., ಡೀಸೆಲ್ ಬೆಲೆ ಇಳಿಕೆ ಎಂಬ ವರದಿಯನ್ನು ಈ ದಿನದ ಅರಿವಿದ್ದ ಮಂದಿ ನಂಬಲು ಹಿಂದೆ ಮುಂದೆ ನೋಡಿದ್ದಾರಂತೆ.

ಬೇಸ್ತುಬಿದ್ದಿಲ್ಲತಾನೆ. -ಶಶಿ