ಸೋಮವಾರಪೇಟೆ, ಏ.1 : ಸೋಮವಾರಪೇಟೆ ಪಟ್ಟಣ ಪಂಚಾಯಿತಿಯಲ್ಲಿ 11 ವಾರ್ಡ್‍ಗಳಿದ್ದು, ಸಾವಿರದ ಒಂಭೈನೂರಕ್ಕೂ ಅಧಿಕ ಕುಟುಂಬಗಳು ನೆಲೆಸಿವೆ. ಪ್ರತಿ ಮನೆಯಲ್ಲೂ ದಿನಂಪ್ರತಿ ತ್ಯಾಜ್ಯ ಉತ್ಪತ್ತಿಯಾಗುತ್ತಿದ್ದು, ಇದನ್ನು ವಿಲೇವಾರಿ ಮಾಡುವದೇ ಪಟ್ಟಣ ಪಂಚಾಯಿತಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.ಕರ್ಕಳ್ಳಿಯಲ್ಲಿ ಕಸ ಸುರಿಯುವದನ್ನು ಸ್ಥಗಿತಗೊಳಿಸಿದ ಪರಿಣಾಮ ಭುವನಗಿರಿ ಗ್ರಾಮದಲ್ಲಿ ಪಟ್ಟಣದ ತ್ಯಾಜ್ಯ ವಿಲೇವಾರಿ ಮಾಡುತ್ತಿದ್ದ ಸಂದರ್ಭ ಅಲ್ಲಿನ ನಿವಾಸಿಗಳು ತಡೆಯೊಡ್ಡಿರುವದರಿಂದ ಪಟ್ಟಣವಾಸಿಗಳ ಮನೆಯಿಂದ ತ್ಯಾಜ್ಯ ಸಂಗ್ರಹವಾಗದೇ ಜನರು ತೊಂದರೆ ಅನುಭವಿಸುತ್ತಿದ್ದಾರೆ.

ಕಳೆದ 3 ವರ್ಷಗಳಿಂದ ಇಲ್ಲಿಗೆ ಸಮೀಪದ ಕರ್ಕಳ್ಳಿ ಗ್ರಾಮದಲ್ಲಿ ಖಾಸಗಿ ವ್ಯಕ್ತಿಯೋರ್ವರಿಗೆ ಸೇರಿದ ಸ್ಥಳದಲ್ಲಿ ತ್ಯಾಜ್ಯ ಸುರಿಯಲಾಗುತ್ತಿತ್ತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸ್ಥಳೀಯರು, ಕಸವನ್ನು ಸುರಿಯದಂತೆ ಪಂಚಾಯಿತಿಗೆ ತಾಕೀತು ಮಾಡಿದ್ದರು.ಈ ಸಂದರ್ಭ ಉಭಯ ಕಡೆಯೂ ಮಾತುಕತೆ ನಡೆದು ಒಂದು ತಿಂಗಳ ಕಾಲಾವಕಾಶವನ್ನು ಪಂಚಾಯಿತಿಗೆ ನೀಡಲಾಗಿತ್ತು. ಈ ಅವಧಿ ಮುಗಿದಿದ್ದರಿಂದ ಇಲ್ಲಿನ ಪ.ಪಂ. ಅಧಿಕಾರಿಗಳು ಕುಶಾಲನಗರ ಪಟ್ಟಣ ಪಂಚಾಯಿತಿಯೊಂದಿಗೆ ಮಾತುಕತೆ ನಡೆಸಿ, ಭುವನಗಿರಿ ಗ್ರಾಮದಲ್ಲಿ ಕಸ ವಿಲೇವಾರಿಗೆ ಮುಂದಾಗಿದ್ದರು.

ಸೋಮವಾರಪೇಟೆ ಪಟ್ಟಣದ ಬಸ್‍ನಿಲ್ದಾಣ ಸುತ್ತಮುತ್ತಲಿನಲ್ಲಿ ಸಂಗ್ರಹವಾಗಿದ್ದ ತ್ಯಾಜ್ಯವನ್ನು ಎರಡು ಟ್ರ್ಯಾಕ್ಟರ್‍ಗಳಲ್ಲಿ ಸಾಗಿಸಿ ಭುವನಗಿರಿಯಲ್ಲಿ ವಿಲೇವಾರಿ ಮಾಡುವ ಸಂದರ್ಭ ಆಕ್ಷೇಪ ವ್ಯಕ್ತಪಡಿಸಿದ ಸ್ಥಳೀಯರು, ಪೊಲೀಸ್ ಠಾಣೆಗೆ ದೂರು ನೀಡಿದರು. ಠಾಣೆಯಲ್ಲಿ ಮಾತುಕತೆ ನಡೆದು ನಿನ್ನೆ ರಾತ್ರಿ ವಾಹನಗಳನ್ನು ವಾಪಸ್ ಕಳುಹಿಸಿದ್ದಾರೆ.

ಕಳೆದ ಒಂದು ವಾರದಿಂದ ನಗರದ 11 ವಾರ್ಡ್‍ಗಳಿಂದ ಕಸ ಸಂಗ್ರಹಿಸುವ ಕೆಲಸ ಸ್ಥಗಿತಗೊಂಡಿದ್ದು, ಮನೆಯಲ್ಲಿ ಉತ್ಪತ್ತಿಯಾಗುತ್ತಿರುವ ತ್ಯಾಜ್ಯವನ್ನು ಎಲ್ಲಿ ಸಂಗ್ರಹಿಸಬೇಕು? ಎಂಬ ಪ್ರಶ್ನೆ ಉದ್ಭವವಾಗಿದೆ. ಒಂದು ವೇಳೆ ವಾಹನಗಳಲ್ಲಿ ಕಸ ಸಂಗ್ರಹಿಸಲು ಮುಂದಾದರೆ ಅದನ್ನು ವಿಲೇವಾರಿ ಮಾಡುವದೆಲ್ಲಿ? ಎಂಬ ಸಮಸ್ಯೆ ಪಂಚಾಯಿತಿಯನ್ನು ಕಾಡುತ್ತಿದೆ.

ಈ ಹಿಂದೆ ಸಿದ್ದಲಿಂಗಪುರದಲ್ಲಿ ಕಸ ವಿಲೇವಾರಿಗೆ ಸ್ಥಳ ಗುರುತಿಸಿ ಆವರಣ ಗೋಡೆಯನ್ನೂ ನಿರ್ಮಿಸಲಾಗಿತ್ತು. ಇದಕ್ಕೂ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಅಲ್ಲಿ ಕಸ ಹಾಕುತ್ತಿಲ್ಲ. ಕಲ್ಕಂದೂರಿನಲ್ಲಿರುವ ಕಲ್ಲುಕೋರೆಯ ಗುಂಡಿಗೆ ಕಸವನ್ನು ಹಾಕಲು ಮುಂದಾದ ಸಂದರ್ಭವೂ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿತ್ತು. ಹೀಗಾಗಿ ಸೋಮವಾರಪೇಟೆ ಪ.ಪಂ. ವ್ಯಾಪ್ತಿಯ ಕಸವನ್ನು ಎಲ್ಲಿ ವಿಲೇವಾರಿ ಮಾಡುವದು ಎಂಬ

(ಮೊದಲ ಪುಟದಿಂದ) ಪ್ರಶ್ನೆ ಪಟ್ಟಣ ಪಂಚಾಯಿತಿಯನ್ನು ಭೂತಾಕಾರದಲ್ಲಿ ಕಾಡುತ್ತಿದೆ. ಕಗ್ಗಂಟಾಗಿಯೇ ಉಳಿದಿರುವ ತ್ಯಾಜ್ಯ ವಿಲೇವಾರಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ತಾ. 3ರಂದು ಕ್ಷೇತ್ರದ ಶಾಸಕರ ಉಪಸ್ಥಿತಿಯಲ್ಲಿ ಪ.ಪಂ. ಆಡಳಿತ ಮಂಡಳಿಯ ಸಭೆ ಕರೆಯಲಾಗಿದೆ. ಸಭೆಯಲ್ಲಿ ಕಸ ವಿಲೇವಾರಿಗೆ ಸಂಬಂಧಿಸಿದಂತೆ ದಿಟ್ಟ ನಿರ್ಧಾರ ಕೈಗೊಳ್ಳಲಾಗುವದು. ಆನಂತರ ಪ.ಪಂ. ವ್ಯಾಪ್ತಿಯಲ್ಲಿ ಕಸ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗುವದು ಎಂದು ಮುಖ್ಯಾಧಿಕಾರಿ ನಾಚಪ್ಪ ತಿಳಿಸಿದ್ದಾರೆ. ಒಟ್ಟಾರೆ ಸೋಮವಾರಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಮಾತ್ರ ಬಹುದೊಡ್ಡ ಸವಾಲಾಗಿ ಕಾಡುತ್ತಲೇ ಇದೆ. -ವಿಜಯ್ ಹಾನಗಲ್