ಮಡಿಕೇರಿ, ಏ. 1: ವಾಂಡರರ್ಸ್ ಸ್ಪೋಟ್ರ್ಸ್ ಕ್ಲಬ್ ಹಾಗೂ ಮ್ಯಾನ್ಸ್ ಹಾಕಿ ಅಕಾಡೆಮಿಯ ಜಂಟಿ ಆಶ್ರಯದಲ್ಲಿ 23ನೇ ವರ್ಷದ ಬೇಸಿಗೆ ಕ್ರೀಡಾ ತರಬೇತಿ ಶಿಬಿರಕ್ಕೆ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಚಾಲನೆ ದೊರೆಯಿತು.

ಒಂದು ತಿಂಗಳ ಕಾಲ ನಡೆಯುವ ಶಿಬಿರವನ್ನು ದಿ. ಸಿ.ವಿ. ಶಂಕರ್ ಅವರ ಜನ್ಮದಿನದಂದು ಹಿರಿಯ ನಾಗರಿಕರ ವೇದಿಕೆಯ ಪ್ರಮುಖರಾದ ಜಿ.ಟಿ. ರಾಘವೇಂದ್ರ ಉದ್ಘಾಟಿಸಿದರು.

ಆನಂತರ ಮಾತನಾಡಿದ ಅವರು ದೇಹವನ್ನು ದಂಡಿಸುವದರಿಂದ ಆರೋಗ್ಯ ವೃದ್ಧಿಯಾಗುವದಲ್ಲದೆ ಸಾಧನೆ ಹಾಗೂ ಕ್ರಿಯಾಶೀಲತೆಗೆ ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಒಲಂಪಿಯನ್ ಎಂ.ಎಸ್. ಮೊಣ್ಣಪ್ಪ ಮಾತನಾಡಿ, ವಿದ್ಯಾರ್ಥಿಗಳು ಪಠ್ಯ ಚಟುವಟಿಕೆಯೊಂದಿಗೆ ಕ್ರೀಡಾಸಕ್ತಿಯನ್ನು ಕೂಡ ಬೆಳೆಸಿಕೊಳ್ಳಬೇಕೆಂದು ಸಲಹೆ ನೀಡಿದರು.

ಹಾಕಿ, ಯೋಗ, ಅಥ್ಲೆಟಿಕ್ಸ್ ಕ್ರೀಡೆಗಳಿಗೆ ಉಚಿತವಾಗಿ ತರಬೇತಿ ನೀಡಲಾಗುವದು ಮತ್ತು ಶಿಬಿರದ ನಡುವೆ ಚಾರಣವನ್ನು ಕೂಡ ಆಯೋಜಿಸಲಾಗುವದು ಎಂದು ಕ್ಲಬ್‍ನ ಪ್ರಮುಖ ಬಾಬು ಸೋಮಯ್ಯ ತಿಳಿಸಿದರು.

ಪ್ರಮುಖರಾದ ಎಂ.ಎಸ್. ಮೊಣ್ಣಪ್ಪ, ಸಿ.ವಿ.ಶಂಕರ್ ಅವರ ಪತ್ನಿ ಶಾಂತಿ ಶಂಕರ್, ಪುತ್ರ ಗುರುದತ್, ಹಾಕಿ ತರಬೇತುದಾರರಾದ ಕೋಟೇರ ನಾಣಯ್ಯ, ಶ್ಯಾಂ ಪೂಣಚ್ಚ, ಕಿಶನ್ ಪೂವಯ್ಯ, ಗಣೇಶ್, ಯೋಗ ಶಿಕ್ಷಕ ವೆಂಕಟೇಶ್, ಕ್ರೀಡಾ ಶಿಕ್ಷಕರುಗಳಾದ ಲಕ್ಷ್ಮಣ್ ಸಿಂಗ್, ಬಾಬು ಸೋಮಯ್ಯ, ರಾಘವೇಂದ್ರ ಉಪಸ್ಥಿತರಿದ್ದರು.

ಗಣ್ಯರು ಸಿ.ವಿ. ಶಂಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು.

ಶಿಬಿರ ಮೇ 2 ರವರೆಗೆ ನಡೆಯಲಿದ್ದು, ಅಧಿಕ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದಾರೆ.