ವೀರಾಜಪೇಟೆ, ಏ. 1: ವೀರಾಜಪೇಟೆ ಬಳಿಯ ಅಮ್ಮತ್ತಿ ಕಣ್ಣಂಗಾಲದಲ್ಲಿ ಶುಕ್ರವಾರ ಬೆಳಗ್ಗಿನ ಜಾವ ಕಳವು ಮಾಡಿದ್ದ ರೂ 1,65000 ಮೌಲ್ಯದ ಕರಿ ಮೆಣಸನ್ನು ಪೊಲೀಸರು ಸಿನಿಮಿಯ ಮಾದರಿಯಲ್ಲಿ ಪತ್ತೆ ಹಚ್ಚಿ ಮೂವರನ್ನು ಬಂಧಿಸಿದ್ದಾರೆ. ಇಲ್ಲಿನ ನ್ಯಾಯಾಲಯದ ಮುಂದೆ ಹಾಜರು ಪಡಿಸಿದ ಮೇರೆ ಮೂವರನ್ನು 15 ದಿನಗಳವರೆಗೆ ನ್ಯಾಯಾಂಗ ಬಂಧನದಲ್ಲಿಡುವಂತೆ ನ್ಯಾಯಾಧೀಶರು ಆದೇಶಿಸಿದ್ದಾರೆ.

ಪುಲಿಯೇರಿ ಗ್ರಾಮದ ರಿಯಾಜ್ ಎಂಬವರು ಕಣ್ಣಂಗಾಲದ ಕಾಫಿ ಬೆಳೆಗಾರರೊಬ್ಬರ ಕಾಫಿ ತೋಟವನ್ನು ಫಸಲಿನ ಗುತ್ತಿಗೆಗೆ ಪಡೆದಿದ್ದು ಕರಿ ಮೆಣಸನ್ನು ಕುಯ್ದು ಗುರುವಾರ ಸಂಜೆ ದಾಸ್ತಾನು ಕೊಠಡಿಯಲ್ಲಿಟ್ಟಿದ್ದರು. ಕಾಫಿ ತೋಟಕ್ಕೆ ಹುಣಸೂರಿನ ಕೆ. ಕುಮಾರ್ ಎಂಬಾತನನ್ನು ಇತ್ತೀಚೆಗೆ ಕಾವಲುಗಾರನನ್ನಾಗಿ ನೇಮಕ ಮಾಡಿದ್ದರು. ನಿನ್ನೆ ದಿನ ರಿಯಾಜ್ ತೋಟಕ್ಕೆ ಬಂದು ನೋಡಿದಾಗ ಕೊಠಡಿಯ ಚಿಲಕ ಮುರಿದಿದ್ದನ್ನು ಕಂಡು ಒಳ ಹೋಗಿ ನೋಡಿದಾಗ ಅಲ್ಲಿ ಕರಿಮೆಣಸು ಕಳವು ಆಗಿರುವದು ಪತ್ತೆಯಾಯಿತು. ನಂತರ ಇಲ್ಲಿನ ಗ್ರಾಮಾಂತರ ಪೊಲೀಸರಿಗೆ ದೂರು ನೀಡಿದ ಮೇರೆಗೆ ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ನಾಪತ್ತೆಯಾಗಿದ್ದ

ಕೆ. ಕುಮಾರನನ್ನು ತನಿಖೆಗೊಳಪಡಿಸಿದಾಗ ಆತ ನೀಡಿದ ಸುಳಿವಿನ ಮೇರೆಗೆ ಮನೆಯೊಂದರಲ್ಲಿ ಕರಿಮೆಣಸಿನೊಂದಿಗಿದ್ದ ಅಮ್ಮತ್ತಿಯ ಎಂ. ಕುಮಾರ ಹಾಗೂ ಆಟೋ ಚಾಲಕ ಟಿ.ಎನ್. ಮಹೇಶ್‍ನನ್ನು ಬಂಧಿಸಿದರು. ಜೊತೆಯಲ್ಲಿದ್ದ ಕರಿಮೆಣಸನ್ನು ಪೊಲೀಸರು ವಶ ಪಡಿಸಿಕೊಂಡ ನಂತರ ಮೂವರು ಸೇರಿ ಕರಿ ಮೆಣಸನ್ನು ಕಳವು ಮಾಡಿ ಮಾರಾಟ ಮಾಡಲು ಯತ್ನಿಸಿದ್ದು ಬೆಳಕಿಗೆ ಬಂದಿದೆ.

ಡಿವೈಎಸ್ಪಿ ನಾಗಪ್ಪ, ಸರ್ಕಲ್ ಇನ್ಸ್‍ಪೆಕ್ಟರ್ ಕುಮಾರ್ ಆರಾಧ್ಯ, ಸಬ್‍ಇನ್ಸ್‍ಪೆಕ್ಟರ್ ನಂಜುಂಡಸ್ವಾಮಿ ಸಿಬ್ಬಂದಿಗಳು ಕರಿಮೆಣಸು ಕಳವು ಮಾಡಿದ ಕೆಲವೇ ಗಂಟೆಗಳಲ್ಲಿ ಪ್ರಕರಣವನ್ನು ಪತ್ತೆ ಹಚ್ಚಿ ಕರಿಮಣಸು ಅಕ್ರಮ ಸಾಗಾಟಕ್ಕೆ ಬಳಸಿದ ಆಟೋವನ್ನು ವಶ ಪಡಿಸಿಕೊಂಡಿದ್ದಾರೆ.